ಮಾಸ್ಕೋ, ಜ 21: ರಷ್ಯಾದ ತೊಮ್ಸ್ಕ್ ಪ್ರಾಂತ್ಯದ ಪ್ರಿಚುಲಿಮಿಸ್ಕಿ ಗ್ರಾಮದಲ್ಲಿ ಮರದಲ್ಲಿ ನಿರ್ಮಿಸಲಾದ ಒಂದು ಅಂತಸ್ಸಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಉಂಟಾಗಿ ಕನಿಷ್ಟ 11 ಮಂದಿ ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆಗಳ ಸಚಿವಾಲಯದ ಪ್ರಾಂತೀಯ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ ಅನಾಹುತದಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ಧೃಡಪಟ್ಟಿತ್ತು. ಆದರೆ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ ಎಂದು ಸ್ಪುಟ್ನಿಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 7.03ಕ್ಕೆ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಸಚಿವಾಲಯದ ಪ್ರಕಟಣೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಗ್ನಿ ದುರಂತ ಕುರಿತು ಕ್ರಿಮಿನಲ್ ವಿಚಾರಣೆ ಆರಂಭಿಸುವುದಾಗಿ ರಷ್ಯಾ ತನಿಖಾ ಸಮಿತಿಯ ತೊಮ್ಸ್ಕ್ ಪ್ರಾಂತೀಯ ಶಾಖೆ ತಿಳಿಸಿದೆ.
ದುರಂತದಲ್ಲಿ ಮೃತಪಟ್ಟವರು ವಿದೇಶೀಯರಾಗಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಇಬ್ಬರು ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರರೆ ಎಂದು ಪ್ರಾದೇಶಿಕ ತುರ್ತು ಸೇವೆಗಳ ಪ್ರತಿನಿಧಿಯೊಬ್ಬರು ಸ್ಪುಟ್ನಿಕ್ ಗೆ ತಿಳಿಸಿದ್ದಾರೆ.
ಸ್ಥಾಪಿಸಲಾಗಿರುವ ಕಾರ್ಯಾಚರಣೆ ಕೇಂದ್ರದಲ್ಲಿ ಘಟನೆಗೆ ಸಂಬಂಧಿಸಿ ತೊಮ್ಸ್ಕ್ ಪ್ರಾದೇಶಿಕ ಗವರ್ನರ್ ಸೆರ್ಜಿ ಜವಚ್‍ಕಿನ್ ಅವರು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದಾರೆ.