ಭೂ ಸರ್ವೆ ಅಧಿಕಾರಿ ಹುಡುಕಿದ ರುದ್ರ ರಮಣೀಯ ಸೈಕ್ಸ ಪಾಯಿಂಟ್
ಕಾರವಾರ 01 : ದಾಂಡೇಲಿಯ ಕಾಳಿ ಕಣಿವೆಯ ಅದ್ಬುತಗಳಲ್ಲಿ ಅಂಬಿಕಾನಗರದ ಸೈಕ್ಸ್ ಪಾಯಿಂಟ್ ಕೂಡ ಮಹತ್ವದ್ದು. 80ರ ದಶಕದಲ್ಲಿ ಆರಂಭಗೊಂಡ ಕಾಳಿ ಜಲವಿದ್ಯುತ್ ಯೋಜನೆಯಿಂದ ಈ ರುದ್ರ ರಮಣೀಯ ತಾಣಕ್ಕೆ ಇಂದು ತಲುಪಬೇಕೆಂದರೆ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಅನುಮತಿ ಅತ್ಯಗತ್ಯ. ಸೈಕ್ಸ್ ಪಾಯಿಂಟ್ ನಿಷೇದಿತ ಪ್ರದೇಶ. ಅಲ್ಲಿಗೆ ಹೋಗಬೇಕೆನ್ನುವವವರು ಅಂಬಿಕಾನಗರದ ಕೆ.ಪಿ.ಸಿ ಭದ್ರತಾ ಸಿಬ್ಬಂದಿಗಳ ಕಛೇರಿಯ ಅನುಮತಿ ಪಡೆದು , ನಂತರ ಅಲ್ಲಿಂದ 5 ಕಿ.ಮೀ ದೂರ ಸಾಗಿದರೆ, ಸುಂದರ ಪ್ರಕೃತಿಯನ್ನು ಕಾಣಬಹುದು.*ಸೈಕ್ಸ್ ಪಾಯಿಂಟ್:* ಅಂಬಿಕಾ ನಗರದ ರುದ್ರ ರಮಣೀಯ ತಾಣವನ್ನು ಮೊಟ್ಟ ಮೊದಲಿಗೆ 1923 ರಲ್ಲಿ ಬ್ರಿಟಿಷ್ ಸರ್ಕಾರದ ಭೂಸರ್ವೆ ಅಧಿಕಾರಿಯಾಗಿದ್ದ ಸೈಕ್ಸ್ ಗುರುತಿಸಿದ. ಭೂ ಸರ್ವೆ ಹಾಗೂ ಕಾಳಿ ಕಣಿವೆ ಭೇಟೆಗಾಗಿ ಅಂಬಿಕಾನಗರ ಬಳಿಯ ಕಾಳಿ ಕಣಿವೆ ಪ್ರದೇಶಕ್ಕೆ ಬಂದಾಗ ಅಧಿಕಾರಿ ಸೈಕ್ಸ ಗುರುತಿಸಿದ ಎಂದು ಬ್ರಿಟಿಷ್ ಕಾಲದ ಗೆಝಟಿಯರ್ ಹೇಳುತ್ತದೆ. ಅಧಿಕಾರಿ ಸೈಕ್ಸ್ ಇಲ್ಲಿಯ ಬಂಡೆಯೊಂದಂರ ಮೇಲೆ ನಿಂತು ಹಳಿಯಾಳ ಮತ್ತು ಯಲ್ಲಾಪೂರ ತಾಲೂಕುಗಳಿಗೆ ಸೇರಿದ ಸುಂದರವಾದ ಪ್ರಕೃತಿ ಸೌಂದರ್ಯವನ್ನೊಳಗೊಂಡ ಸುತ್ತಲಿನ ಪ್ರದೇಶವನ್ನು ವೀಕ್ಷಿಸಿ, ದಟ್ಟ ಕಾನನ, ಗುಡ್ಡ ಬೆಟ್ಟಗಳಿಂದ ಕೂಡಿದ ಕಣಿವೆಯನ್ನು ಗಮನಿಸಿದ. 1100 ಅಡಿ ಆಳದ ಕಾಳಿ ಕಣಿವೆಯ ಮೂಲಕ ಕಾಳಿ ನದಿಯನ್ನು ವೀಕ್ಷಿಸಿದ. ಹಾಗೂ ಈ ಪ್ರದೇಶದ ಕುರಿತು ದಾಖಲಿಸಿದ . ಆತ ವೀಕ್ಷಿಸಿದ ಸ್ಥಳವನ್ನೇ ' ಸೈಕ್ಸ್ ಪಾಯಿಂಟ್ ' ಎನ್ನುವ ಹೆಸರಿನಿಂದ ಇಂದಿಗೂ ಗುರುತಿಸಲ್ಪಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಈ ಸ್ಥಳಕ್ಕೆ ಭೇಟಿ ನೀಡಿ , ಇಲ್ಲಿಯ ನಿಸರ್ಗದ ರೌದ್ರವತೆಗೆ ಮನಸೋತಿದ್ದರು. ಅವರ ನೆನಪಿಗಾಗಿ ಜಯಚಾಮರಾಜೇಂದ್ರ ಒಡೆಯರ್ ಪಾಯಿಂಟ್ ಕೂಡಾ ಅಂಬಿಕಾ ನಗರದ ವಿದ್ಯುತ್ ಪವರ್ ಹೌಸ್ ನ ಮೇಲಿದೆ.ಆದರೆ ಈಗ ಜಯಚಾಮರಾಜೇಂದ್ರ ಒಡೆಯರ್ ಪಾಯಂಟ್ ಬಗ್ಗೆ ಯಾರೂ ಪ್ರಸ್ತಾಪ ಮಾಡುತ್ತಿಲ್ಲ.ಬ್ರಿಟಿಷ್ ಅಧಿಕಾರಿಯ ಹೆಸರಿನಿಂದಲೇ ಇಂದಿಗೂ ಸೈಕ್ಸ್ ಪಾಯಿಂಟ್ ಗುರುತಿಸಲ್ಪಡುತ್ತದೆ. ಅದು ಭೂ ಸರ್ವೆ ಅಧಿಕಾರಿ ಸೈಕ್ಸನ ಹೆಗ್ಗಳಿಕೆ.ಅಂದು ಬ್ರಿಟಿಷ್ ಅಧಿಕಾರಿಗಳು ಇಲ್ಲಿ ನಿಂತು ಕೆಳಕ್ಕೆ ನೋಡಿದರೆ ಎಲ್ಲ ಬಗೆಯ ಕಾಡು ಪ್ರಾಣಿಗಳು ಸ್ವಚ್ಚಂದವಾಗಿ ತಿರುಗಾಡುತ್ತಿರುವುದು ಕಾಣುತ್ತಿತ್ತಂತೆ.*70 ರ ದಶಕದಲ್ಲಿ**ಆರಂಭಗೊಂಡ ಕಾಳಿ ಜಲ* *ವಿದ್ಯುತ್ ಯೋಜನೆ:*70 ರ ದಶಕದಲ್ಲಿಆರಂಭಗೊಂಡ ಕಾಳಿ ಜಲ ವಿದ್ಯುತ್ ಯೋಜನೆಯಿಂದಲೇ ಈ ಕಾಳಿ ಕಣಿವೆಯ ಪ್ರದೇಶ ವಿದ್ಯುತ್ ಉತ್ಪಾದನಾ ಯೋಜನಾ ಪ್ರದೇಶವಾಗಿ ಬದಲಾಯಿತು. ವಿದ್ಯುತ್ ಉತ್ಪಾದನೆಯ ಪ್ರಮುಖ ತಾಣವಾಯಿತು. ಕಾಳಿ ನದಿಗೆ ಕಟ್ಟಿದ ಬೊಮ್ಮನಳ್ಳಿ ಡ್ಯಾಮ ಬಳಿ ಇಂಟೆಕ್ ಟನಲ್ ಮಾರ್ಗವಾಗಿ ಸೈಕ್ಸ್ ಪಾಯಿಂಟ್‌ನಲ್ಲಿ ನಿರ್ಮಿಸಿರುವ ಸರ್ಚಟ್ಯಾಂಕ್‌ನಿಂದ ಅಗತ್ಯಕ್ಕೆ ತಕ್ಕಂತೆ 1100 ಅಡಿ ಪೆನ್‌ಸ್ಟಾಕ್ ಮಾರ್ಗವಾಗಿ ನಾಗಝರಿ ಪವರ್ ಹೌಸ್ ನ ಜನರೇಟರುಗಳಿಗೆ ಕಾಳಿ ನದಿ ನೀರನ್ನು ಹರಿಸಿ , ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಸೈಕ್ಸ್ ಪಾಯಿಂಟ್ ಕೆಳಕ್ಕೆ ನೋಡಿದರೆ 1100 ಅಡಿ ಕೆಳಗೆ ನಾಗಝರಿ ಪವರ್ ಹೌಸ್ ಹಾಗೂ ದಟ್ಟ ಅರಣ್ಯದ ನಡುವೆ ಕಾಳಿ ನದಿ ಹರಿಯುತ್ತಿರುವ ದೃಶ್ಯ ಕಾಣುತ್ತದೆ. ಇಲ್ಲಿಯ ಪಶ್ಚಿಮ ಘಟ್ಟದ ಸಾಲು, ಎತ್ತರದ ಬೆಟ್ಟಗುಡ್ಡಗಳ ನಡುವೆ ಕಾಣುವ ಕವಳಾ ಗುಹೆಯ ಕವಳೇಶ್ವರನಿರುವ ತಾಣವೂ ಅಡಗಿದೆ. ಕವಳಾ ಗುಹೆಯನ್ನು ತಲುಪಲು ನಾಗಝರಿ ಪವರ್ ಹೌಸ್ ನ ಸಮೀಪ ಕೆಲವರ್ಷಗಳ ಹಿಂದೆ ಕೆ.ಪಿ.ಸಿ. ಯವರು ಮೆಟ್ಟಿಲುಗಳನ್ನು ನಿರ್ಮಿಸಿ, ಅನುಕೂಲ ಕಲ್ಪಿಸಿದ್ದರು. ಈಗ ಅದು ನಿರ್ವಹಣೆ ಇಲ್ಲದೆ ಹಾಳಾಗಿವೆ. ಹುಲಿಯೋಜನಾ ಪ್ರದೇಶವಾದ್ದರಿಂದ ಕೆ.ಪಿ.ಸಿ. ಯವರು ಮೆಟ್ಟಿಲುಗಳನ್ನುಮುಟ್ಟುವಂತಿಲ್ಲ. ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಂದು ನಡೆಯುವ ಕವಳಾ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ದೂರ ದೂರದ ಭಕ್ತರು ಬಂದು ಹೋಗುತ್ತಾರೆ. ಭಕ್ತರ ಹಿತದೃಷ್ಠಿಯಿಂದ ಈ ಮೆಟ್ಟಿಲುಗಳ ದುರಸ್ಥಿಗೆ ವನ್ಯ ಜೀವಿ ಇಲಾಖೆ, ಕೆ.ಪಿ.ಸಿ. ಜಂಟಿಯಾಗಿ ನಿರ್ವಹಣೆ ಮಾಡಬೇಕಿದೆ. ಪ್ರವಾಸಿಗರು ಈ ರುದ್ರ ರಮಣೀಯ ತಾಣವನ್ನು ಜೀವನದಲ್ಲಿ ಒಮ್ಮೆ ನೋಡಬೇಕು........