ಆಗಸ್ಟ್‌-2025 ವರೆಗೆ ಗೃಹಲಕ್ಷ್ಮಿ ಹಣ ಜಮೆ

ಆಗಸ್ಟ್‌-2025 ವರೆಗೆ ಗೃಹಲಕ್ಷ್ಮಿ ಹಣ ಜಮೆ  Rs.54,000 crore paid to 1.24 crore women under the scheme said Minister Lakshmi Hebbalkar

ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ ರೂ.54,000 ಕೋಟಿ ಹಣ ಸಂದಾಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್  

ಬೆಳಗಾವಿ ಸುವರ್ಣ ವಿಧಾನಸೌಧ ಡಿ. 09: ರಾಜ್ಯ ಸರ್ಕಾರದಿಂದ ಆಗಸ್ಟ್‌-2025 ವರೆಗಿನ ಗೃಹಲಕ್ಷ್ಮಿ ಕಂತುಗಳನ್ನು ಫಲಾನುಭವಿಗಳ ಖಾತೆ ಜಮೆ ಮಾಡಲಾಗಿದೆ. ಯೋಜನೆ ಆರಂಭವಾದಗಿನಿಂದ ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ ರೂ.54,000 ಕೋಟಿ ಗೃಹಲಕ್ಷ್ಮಿ ಹಣ ಸಂದಾಯವಾಗಿದೆ. ಒಟ್ಟು 23 ಕಂತುಗಳಲ್ಲಿ ನೊಂದಣಿಯಾದ ಪ್ರತಿ ಕುಟುಂಬದ ಯಜಮಾನಿಗೆ ತಲಾ ರೂ.46,000 ಲಭಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು, ವಿಕಲಚೇತನರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಸಭೆಯ ಮಾಹಿತಿ ನೀಡಿದರು.  

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಗಮನ ಸೆಳೆಯುವ ಸೂಚನೆ ಉತ್ತರಿಸಿ ಅವರು ಮಾತನಾಡಿದರು.  

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ವಿಶ್ವದಲ್ಲಿಯೇ ವಿನೂತನ ಎನಿಸಿ ಗುರುತರ ಹೆಜ್ಜೆ ಇಟ್ಟಿದೆ. ಬೇರೆ ರಾಜ್ಯಗಳು ಕೂಡ ಗೃಹಲಕ್ಷ್ಮಿ ಯೋಜನೆ ಮಾದರಿಯಿಂದ ಪ್ರೇರಣೆ ಪಡೆದು ಯೋಜನೆ ರೂಪಿಸುತ್ತಿವೆ. ಸರ್ಕಾರ ಸ್ಪಷ್ಟತೆ ಹಾಗೂ ಬದ್ದತೆಯೊಂದಿಗೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಇಲಾಖೆಯಲ್ಲಿ ಸಕಾಲದಲ್ಲಿ ಕಡತವನ್ನು ಹಣಕಾಸು ಇಲಾಖೆ ಕಳುಹಿಸಿಕೊಡಲಾಗುತ್ತಿದೆ. ಈ ಹಿಂದೆ ಇಲಾಖೆಯಿಂದಲೇ ಫಲಾನುಭವಿಗಳ ಖಾತೆ ರೂ.2000 ಹಣ ಜಮೆ ಮಾಡಲಾಗುತ್ತಿತ್ತು. ಸದ್ಯ ತಾಲ್ಲೂಕು ಪಂಚಾಯಿತಿಗಳಿಂದ ಫಲಾನುಭವಿಗಳ ಖಾತೆ ಹಣ ಜಮೆ ಮಾಡಲು ಬದಲಾವಣೆ ಮಾಡಿದ್ದರಿಂದ ಕೆಲ ತಿಂಗಳ ಕಂತು ಪಾವತಿಯಾಗುವಲ್ಲಿ ವಿಳಂಬವಾಗಿದೆ. ಕೂಡಲೇ ಆಗಸ್ಟ್‌ ನಂತರ ಕಂತುಗಳ ಪಾವತಿಗೂ ಕ್ರಮ ವಹಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.