ರೌಡಿ ಶೀಟರ್ ಬಾಬು ದೊಡಮನಿ ಬೀದರ್‌ಗೆ ಗಡಿಪಾರು

ರೌಡಿ ಶೀಟರ್ ಬಾಬು ದೊಡಮನಿ ಬೀದರ್‌ಗೆ ಗಡಿಪಾರು Rowdy sheeter Babu Dodamani deported to Bidar

 ದಾಂಡೇಲಿ 14 : ದಾಂಡೇಲಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿ ಆಸಾಮಿ ಬಾಬು ರಾಮಪ್ಪ ದೊಡ್ಡಮನಿ (41) ಎಂಬುವನನ್ನು 6 ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.  ಆರೋಪಿತ ಬಾಬು ದೊಡಮನಿ ಮೇಲೆ ದಾಂಡೇಲಿ ನಗರ ಠಾಣೆಯಲ್ಲಿ ಎರಡು ಕೊಲೆ ಯತ್ನ, ಮೂರು ದೊಂಬಿ, ಒಂದು ಜೂಜಾಟ, ಒಂದು ಲೈಂಗಿಕ ದೌರ್ಜನ್ಯ, ಒಂದು ಹಲ್ಲೆ, ಒಂದು ಎಸ್ಸಿ  ಎಸ್ಟಿ  ಕಾಯ್ದೆಯಡಿ ಪ್ರಕರಣಗಳಿವೆ.  ಒಟ್ಟು ಒಂಬತ್ತು ಪ್ರಕರಣಗಳು ಈತನ ಮೇಲೆ  ದಾಖಲಾಗಿವೆ. ಬಾಬು  ಮೇಲೆ ರೌಡಿ ಶೀಟ್ ತೆರೆದ ಪೊಲೀಸರು, ಆತನ  ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.  ಆದರೂ ಸಹ ಈತ ಸುಧಾರಣೆಯಾಗದೆ, ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವೆರಸಿಕೊಂಡು ಬಂದ ಹಿನ್ನೆಲೆಯಲ್ಲಿ,  ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದ ಕಾರಣ, ದಾಂಡೇಲಿಯ ಪೋಲಿಸ್ ಉಪ ನೀರೀಕ್ಷಕರು ವಿರುದ್ದ  ಗಡಿಪಾರಿಗೆ ಸೂಕ್ತ ಪ್ರಸ್ತಾವನೆಯನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಪೋಲಿಸ್ ಅಧಿಕ್ಷಕರು ಕಾರವಾರ ಅವರಿಗೆ ಸಲ್ಲಿಸಿದ್ದರು.  

 ಈ ಪ್ರಸ್ತಾವನೆಯನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ಅಭಿಯೋಜನೆ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಮತ್ತು ಪೋಲಿಸ್ ಅಧಿಕ್ಷಕರು  ಸಮಗ್ರ ಪರೀಶೀಲನೆಯಿಂದ ಗಡಿಪಾರು ಅವಶ್ಯವೆಂದು ಕಂಡು ಬಂದದರಿಂದ 2026 ಜೂನ 6 ರಂದು ಕರ್ನಾಟಕ ಪೋಲಿಸ್ ಕಾಯ್ದೆ, 1963 ರ ಕಲಂ 55 (ಎ ಮತ್ತು ಬಿ) ಅಡಿಯಲ್ಲಿ ಬಾಬು ರಾಮಪ್ಪ ದೊಡ್ಡಮನಿ ಈತನನ್ನು ದಾಂಡೇಲಿ ನಗರದಿಂದ ಬೀದರ ಜಿಲ್ಲೆಯ ಬೀದರ ಸಬ್ ಅರ್ಬನ್ ಠಾಣಾ ವ್ಯಾಪ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ದಾಂಡೇಲಿ ನಗರ ಪೋಲಿಸ್ ಠಾಣಾ ಅಧಿಕಾರಿಗಳು ಬಾಬು ರಾಮಪ್ಪ ದೊಡ್ಡಮನಿಯನ್ನು ಬೀದರ ಸಬ್ ಅರ್ಬನ್ ಪೋಲಿಸ್ ಠಾಣೆಯ ಠಾಣಾಧಿಕಾರಿಯ ಮುಂದೆ ಹಾಜರು ಪಡಿಸಲಾಗಿದೆ  ಎಂದು ದಾಂಡೇಲಿ ಪೋಲಿಸರು ತಿಳಿಸಿದ್ದಾರೆ.