ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರೀಶೀಲನೆ: ಡಿಜಿಟಲೀಕರಣಕ್ಕೆ ವೇಗ ನೀಡಲು ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರೀಶೀಲನೆ: ಡಿಜಿಟಲೀಕರಣಕ್ಕೆ ವೇಗ ನೀಡಲು ಸೂಚನೆ  Review of voter list revision progress: Instructions issued to accelerate digitization

ಹೂವಿನಹಡಗಲಿ, ಜು.29: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯದಲ್ಲಿ ಅರ್ಹ ಮತದಾರರು ಹೊರಗುಳಿಯದಂತೆ ಬಿಎಲ್‌ಒಗಳು (ಃಐಓ) ಹೆಚ್ಚಿನ ಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಸೂಚಿಸಿದರು.  

ತಾಲೂಕು ಪಂಚಾಯಿತಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಆರ್ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಡಗಲಿ ಕ್ಷೇತ್ರದಲ್ಲಿ ಶೇ.100ರಷ್ಟು ಎಸ್‌ಎಸ್‌ಆರ್ ಅರ್ಜಿಗಳನ್ನು ವಿತರಿಸಲಾಗಿದ್ದು, ಇದುವರೆಗೆ ಶೇ.86.68ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ತಿಳಿಸಿದರು.  

ಕೆಲವು ಬೂತ್ಗಳ ವ್ಯಾಪ್ತಿಯ ಮತದಾರರು ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ವಿಳಂಬ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿದರೂ ಕೆಲವರು ಸ್ಪಂದಿಸುತ್ತಿಲ್ಲ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಿದರೆ ನಿಗದಿತ ಅವಧಿಯೊಳಗೆ ಶೇ.100ರಷ್ಟು ಡಿಜಿಟಲೀಕರಣ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.  

ಸಭೆಯಲ್ಲಿ ಕೆಲ ಮತದಾರರ ಹೆಸರನ್ನು ಸ್ಕ್ಯಾನ್ ಮಾಡಿದಾಗ ಬೇರೆ ಹೆಸರುಗಳು ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷದ ಬಗ್ಗೆ ಬಿಎಲ್‌ಒಗಳು ಗಮನ ಸೆಳೆದರು. ಅಲಿಪುರ ಮತಗಟ್ಟೆಯಲ್ಲಿ ಇಂತಹ ಸುಮಾರು 30 ಪ್ರಕರಣಗಳು ಪತ್ತೆಯಾಗಿದ್ದು, ಈ ಸಮಸ್ಯೆಯನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಚುನಾವಣಾ ಶಾಖೆಯ ಅಧಿಕಾರಿಗಳು ಭರವಸೆ ನೀಡಿದರು.  

ಸಭೆಯಲ್ಲಿ ತಾ.ಪಂ. ಇಒ ಜಿ. ಪರಮೇಶ್ವರ, ಪುರಸಭೆ ಮುಖ್ಯಾಧಿಕಾರಿ ಜಿ. ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಹನುಮಂತಪ್ಪ ಸೇರಿದಂತೆ ಬಿಎಲ್‌ಒಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.