ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ: ಅರ್ಹರಿಗೆ ಸೌಲಭ್ಯ ತಲುಪಿಸಲು ಅಧಿಕಾರಿಗಳಿಗೆ ಎಸ್‌.ಆರ್‌. ಪಾಟೀಲ ಸೂಚನೆ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ: ಅರ್ಹರಿಗೆ ಸೌಲಭ್ಯ ತಲುಪಿಸಲು ಅಧಿಕಾರಿಗಳಿಗೆ ಎಸ್‌.ಆರ್‌. ಪಾಟೀಲ ಸೂಚನೆ Review of Guarantee Schemes' Progress: S.R. Patil Instructs Officials to Ensure Benefits Reach Eligi

ಧಾರವಾಡ 06: ಮಳೆಯಿಂದ ಅಥವಾ ಇತರೆ ಕಾರಣಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡರೆ ಹೆಸ್ಕಾಂ ಅಧಿಕಾರಿಗಳು ತಕ್ಷಣ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕು. ಹಾಗೂ ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು. 

ಅವರು ಇಂದು (ಜು.6) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೆಪಿಟಿಸಿಎಲ್ (ಕೆಇಬಿ) ಸರ್ವೆ ಕಾರ್ಯ ಆರಂಭಗೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುವವರು ಕೈಬರಹದ ಬಾಡಿಗೆ ಪತ್ರವನ್ನು ಮತ್ತು ಆಧಾರ ಕಾರ್ಡ್‌ ಸಲ್ಲಿಸಿ, ಗೃಹಜ್ಯೋತಿ ಸೌಲಭ್ಯವನ್ನು ಪಡೆಯಬಹುದು. ಲೈನ್‌ಮನ್‌ಗಳು ಸುರಕ್ಷತಾ ಕಿಟ್ ಧರಿಸಿ, ಕೆಲಸ ನಿರ್ವಹಿಸಬೇಕು ಎಂದು ಅವರು ಹೇಳಿದರು.  

ಯುವನಿಧಿ ಯೋಜನೆಯಡಿ ಯುವಕರು ಹಾಗೂ ಯುವತಿಯರಿಗೆ ತರಬೇತಿ ವ್ಯವಸ್ಥೆ ಕಲ್ಪಿಸುವ ಕುರಿತು ಗ್ಯಾರಂಟಿ ಅಧ್ಯಕ್ಷರ ಗಮನಕ್ಕೆ ತರಲು ಸೂಚನೆ ನೀಡಿದರು. ಕೋಚಿಂಗ್ ಕ್ಲಾಸ್‌ಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ತಿಳಿಸಬೇಕು. ಮತ್ತು ಗ್ರಾಮ ಮಟ್ಟದಲ್ಲಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾಹಿತಿ ಶಿಬಿರಗಳನ್ನು ಆಯೋಜಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯ ಪ್ರಯೋಜನಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.  

ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಮಾಹಿತಿ ಸಮರ​‍್ಕವಾಗಿ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮರಣ ಹೊಂದಿದ ಫಲಾನುಭವಿಗಳ ವಿವರಗಳನ್ನು ಪರೀಶಿಲಿಸಿ, ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳ ಸ್ವಚ್ಛತೆ ಕುರಿತು ಅಧಿಕಾರಿಗಳು ಪರೀಶೀಲಿಸಿ, ಅಸ್ವಚ್ಛತೆ ಕಂಡು ಬಂದಲ್ಲಿ ಸಂಬಂಧಿಸಿದ ಸಿಬ್ಬಂದಿಗಳಿಗೆ ದಂಡ ವಿಧಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.  

ಸರ್ಕಾರದ ನಿರ್ದೇಶನದಂತೆ ಎಲ್ಲ ಅನ್ನಭಾಗ್ಯ ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರ ಭಾವಚಿತ್ರ ಮತ್ತು ಮಾಹಿತಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಧಾನ್ಯಗಳ ದರಪಟ್ಟಿ, ಲಭ್ಯವಿರುವ ದಾಸ್ತಾನು ಹಾಗೂ ಧಾನ್ಯಗಳ ವಿತರಣೆಯ ದಿನಾಂಕದ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕೆಂದು ಅವರು ಸೂಚಿಸಿದರು.