ಫೆ.13 ರಂದು ಕಂದಾಯ ಇಲಾಖೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

ಫೆ.13 ರಂದು ಕಂದಾಯ ಇಲಾಖೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ Revenue Department title deed distribution program on Feb. 13

       ಹಾವೇರಿ 23 :  ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಫೆ.13 ರಂದು ಹಾವೇರಿಯಲ್ಲಿ ಜರುಗಲಿದ್ದು,  ಮಾನ್ಯಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಲೋಪದೋಷಗಳು ಉಂಟಾಗದಂತೆ  ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಅಧಿಕಾರಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು  ಅಧಿಕಾರಿಗಳಿಗೆ ಜಿಲ್ಲಾಧಿಕಾರಿ  ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಾವೇರಿ ನಗರದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮ  ಆಯೋಜನೆ ಕುರಿತು ವಿವಿಧ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರವಿತರಣೆ ಮಾಡಲಾಗುತ್ತಿದ್ದು,  86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದಂತೆ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಾವುದೇ ಗೊಂದಲಗಳಿಗೆ ಒಳಗಾಗದೇ ಸಮನ್ವಯದಿಂದ  ಕಾರ್ಯನಿರ್ವಹಿಸಲು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು. 

ಈ ಕಾರ್ಯಕ್ರಮದಲ್ಲಿ  ಜಿಲ್ಲೆಯ ಕಂದಾಯ  ಗ್ರಾಮಗಳ -20,186,  ಇ-ಪೋತಿ -7,825,  ದರಖಾಸ್ತ್‌ ಪೋಡಿ- 502, ಪಿಎಂ.ಜಿ.ಎ- 1,675 ಹಾಗೂ ಬಗರಹುಕುಂ 16 ಸೇರಿದಂತೆ 30,204 ಹಕ್ಕುಪತ್ರಗಳನ್ನು   ನೀಡಲಾಗುತ್ತಿದೆ. ಜಿಲ್ಲೆಯ  ಫಲಾನುಭವಿಗಳು ಹಾಗೂ ಅವರ ಸಂಗಡಿಗರು ಸೇರಿ 60 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ.  ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದಾಜು 1.20 ಲಕ್ಷ ಫಲಾನುಭವಿಗಳು ಆಗಮಿಸುವ ಸಂಭವವಿರುತ್ತದೆ.  ದೊಡ್ಡಮಟ್ಟದ ಕಾರ್ಯಕ್ರಮವಾಗಿರುವುದರಿಂದ ಸುಗಮ ಸಂಚಾರ,  ಫಲಾನುಭವಿಗಳಿಗೆ ಆಸನ, ಊಟ, ಕುಡಿಯುವ ನೀರು, ಶೌಚಾಲಯ,  ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯವನ್ನು ಅತ್ಯಂತ ವ್ಯವಸ್ಥತವಾಗಿ  ಮಾಡಬೇಕು ಎಂದು ಸೂಚನೆ ನೀಡಿದರು. 

ಪ್ರವಾಸಿ ಮಂದಿರ ಕಾಯ್ದಾರಿಸಿ: ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರು ಹಾಗೂ ಗಣ್ಯ ವ್ಯಕ್ತಿಗಳ ವಿಶ್ರಾಂತಿ ಪಡೆದುಕೊಳ್ಳಲು ರಾಣೇಬೆನ್ನೂರು, ಹಾವೇರಿ ಹಾಗೂ ಶಿಗ್ಗಾಂವ ಪ್ರವಾಸಿ ಮಂದರಿಗಳನ್ನು ಕಾಯ್ದಿರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ವೇದಿಕೆಯ ಪಕ್ಕದಲ್ಲಿ ಅಗ್ನಿಶಾಮಕ ವಾಹನ, ಅಂಬ್ಯುಲೆನ್ಸ್‌ ವ್ಯವಸ್ಥೆ ಸೇರಿದಂತೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರಿಗೆ, ವಸತಿ, ವಾಹನ ನಿಲುಗಡೆ, ಊಟದ ವ್ಯವಸ್ಥೆಗೆ ಆಯಾ ಸಮಿತಿಗಳನ್ನು ಸಂಪರ್ಕಿಸಬೇಕು. ಕಳೆದ ವರ್ಷ ಹೊಸಪೇಟೆಯಲ್ಲಿ  ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಗೇನಾದರೂ ಸಂದೇಹಗಳಿದ್ದಲ್ಲಿ  ಆಯಾ ಇಲಾಖೆಯ ಹೊಸಪೇಟೆಯ ಅಧಿಕಾರಿಗಳನ್ನು ಹಾಗೂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.  

ಫಲಾನುಭವಿಗಳಿಗೆ, ಗಣ್ಯ ವ್ಯಕ್ತಿಗಳಿಗೆ, ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ, ಕಾರ್ಯಕ್ರಮಕ್ಕೆ ಆಗಮಿಸುವ ಅಧಿಕಾರಿಗಳಿಗೆ, ವಾಹನಗಳಿಗೆ, ಮಾಧ್ಯಮದವರಿಗೆ, ವಿ.ಐ.ಪಿ.ಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಲಾಯಿತು.  

ಸಭೆಯಲ್ಲಿ   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಯೋಶಧಾ ವಂಟಗೋಡಿ,  ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್, ಜಿ.ಪಂ.ಉಪ ಕಾರ್ಯದಶಿ ಡಾ.ಪುನಿತ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿಗಳಾದ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ,  ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ,  ತಹಶೀಲ್ದಾರ  ಶರಣಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.