ರಾಜಕೀಯ ಭವಿಷ್ಯಕ್ಕಾಗಿ ಮರಳಿ ಬಿಜೆಪಿಗೆ : ವಿಜಯ ಶಂಕರ್

ಬೆಂಗಳೂರು, ನ 5:   ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, ಹೀಗಾಗಿ ಮುಂದಿನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ಉದ್ದೇಶದಿಂದ ಮರಳಿ ಮನೆಗೆ ಬರುತ್ತಿರುವುದಾಗಿ ಮೈಸೂರಿನ ಮಾಜಿ ಸಂಸದ ಸಿ ಎಚ್ ವಿಜಯಶಂಕರ್ ಹೇಳಿಕೊಂಡಿದ್ದಾರೆ. ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳುವ ಹಾಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ತೊರೆದು ಮಂಗಳವಾರ ಬಿಜೆಪಿ ಸೇರುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಳಜಿ ವಹಿಸಿ ಪ್ರಯತ್ನ ಪಟ್ಟಿದ್ದರು. ಹೀಗಾಗಿ ತಾವು ಅವರಿಗೆ ಚಿರ ಋಣಿಯಾಗಿರುವುದಾಗಿ ವಿಜಯಶಂಕರ್ ಹೇಳಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಕ್ಷೀಣಿಸುತ್ತಿದ್ದು ತಮ್ಮ ರಾಜಕೀಯ ಜೀವನ ಸಕ್ರಿಯವಾಗಿರಬೇಕು ಎಂಬ ಕಾರಣಕ್ಕಾಗಿ ಬಿಜೆಪಿ ಗೆ ಸೇರುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.    ಹಳೆಯ ಕಹಿ ನೆನಪುಗಳನ್ನು ಮರೆತು ಬಿಜೆಪಿ ಸೇರುತ್ತಿದ್ದು ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ಮರಳಿ ಬಿಜೆಪಿಗೆ ಬರುತ್ತಿಲ್ಲ ಎಂದು ವಿಜಯ್ ಶಂಕರ್ ಸ್ಪಷ್ಟಪಡಿಸಿದ್ದಾರೆ. ಕಳೆದ 2017 ರ ಅಕ್ಟೋಬರ್ ನಲ್ಲಿ ವಿಜಯ ಶಂಕರ್ ಬಿಜೆಪಿ ತೊರೆದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.