ಬೆಂಗಳೂರು, ಅ 15: ವಿಧಾನಸಭೆ ನಿವೃತ್ತ ಕಾರ್ಯದರ್ಶಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೊಸ ಸಂಪ್ರದಾಯವೊಂದನ್ನು ಹುಟ್ಟುಹಾಕಿದ್ದಾರೆ.
ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಇದೀಗ ಕಾಗೇರಿ ಅವರ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ವಿಧಾನಸಭೆ ಹಾಲಿ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಈ ನೇಮಕಾತಿ ಸ್ಪೀಕರ್ ಅವರಿಗೆ ಮಹಿಳಾ ಅಧಿಕಾರಿ ಮೇಲೆ ನಂಬಿಕೆ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ವಿಧಾನಸಭೆ ಸಚಿವಾಲಯದಲ್ಲಿ ಸಲಹೆಗಾರರು ಹಾಗೂ ಹಾಲಿ ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದ್ದು, ನಿವೃತ್ತ ಕಾರ್ಯದರ್ಶಿಗಳನ್ನೇ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಓಂಪ್ರಕಾಶ್ ಅವರನ್ನು ಕಳೆದ ಹತ್ತು ದಿನಗಳ ಹಿಂದೆಯೇ ಸದ್ದಿಲ್ಲದೇ ತಮ್ಮ ಸಲಹೆಗಾರರನ್ನಾಗಿ ಸ್ಪೀಕರ್ ನೇಮಿಸಿಕೊಂಡಿದ್ದು, ಇದರ ಹಿಂದೆಯೂ ಆರ್.ಎಸ್.ಎಸ್.ನಾಯಕರ ಸೂಚನೆಯ ವಾಸನಾಗ್ರಹಿಕೆ ಇದೆ. ಮತ್ತೊಂದು ಕಡೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಚಿವಾಲಯದ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎನ್ನಲಾಗುತ್ತಿದ್ದು, ಓಂಪ್ರಕಾಶ್ ಅವರನ್ನು ನೇಮಿಸಿಕೊಂಡಿರುವುದಕ್ಕೆ ಕಾಗೇರಿ ಅವರಿಗೆ ಅನುಭವದ ಕೊರತೆಯೋ? ಅಥವಾ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯೋ? ಎಂಬ ಚರ್ಚೆ ವಿಧಾನಸೌಧ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಈ ಹಿಂದೆಯೂ ಸಹ ಓಂ ಪ್ರಕಾಶ್ ಅವರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡಕ್ಕೂ ಮಹಾ ಕಾರ್ಯದರ್ಶಿ ಮಾಡುವ ಪ್ರಯತ್ನ ನಡೆದಿತ್ತು. ಆಗ ಸಚಿವಾಲಯ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಆಗ ನೇಮಕಾತಿ ಕೈಬಿಡಲಾಗಿತ್ತು.
ಸ್ಪೀಕರ್ ಸಲಹೆಗಾರರ ನೇಮಕ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಸ್ಪೀಕರ್ ಗೆ ಸಲಹೆಗಾರ ಹುದ್ದೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ಲವೋ ಎಂ ಬಗ್ಗೆ ತಮಗೆ ಗೊತ್ತಿಲ್ಲ. ಈ ಬಗ್ಗೆ ಸ್ಪೀಕರ್ ಅವರೇ ಹೇಳಬೇಕು. ಸಚಿವರಿಗೆ ಸಲಹೆಗಾರರಾಗಿ ಇರುವುದು ನೋಡಿದ್ದೇವೆ. ಆದರೆ ಸ್ಪೀಕರ್ ಗೆ ಸಲಹೆಗಾರರು ಸಹ ಇರುತ್ತಾರೆ ಎಂಬ ಬಗ್ಗೆ ತಮಗೆ ಜ್ಞಾತವಿಲ್ಲ ಎಂದು ಎಂ.ಬಿ.ಪಾಟೀಲ್ ಸೂಚ್ಯವಾಗಿ ಹೇಳಿದರು.