ಮಾಸ್ಕೋ, ನ 29-ಅಫ್ಘಾನಿಸ್ತಾನದ ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ಪುನರಾರಂಭವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅಫ್ಘಾನಿಸ್ತಾನಕ್ಕೆ ದಿಢೀರ್ ಭೇಟಿ ನೀಡಿದ ಟ್ರಂಪ್, ತಾಲಿಬಾನ್ ಕದನ ವಿರಾಮ ಬಯಸಿದೆ ಎಂದು ತಾವು ಭಾವಿಸಿರುವುದಾಗಿ ಹೇಳಿದ್ದಾರೆ. ತಾಲಿಬಾನ್ ಒಪ್ಪಂದಕ್ಕೆ ಸಿದ್ಧವಿದ್ದು, ಅಮೆರಿಕ ಮಾತುಕತೆಗೆ ಮುಂದಾಗಿದೆ ಎಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಅಮೆರಿಕ ಪಡೆಗಳನ್ನು 8,600 ಕ್ಕೆ ಇಳಿಸಲು ಬಯಸಿರುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ. ಪ್ರಸ್ತುತ ಅಮೆರಿಕ ಪಡೆ 14 ಸಾವಿರಕ್ಕಿಂತ ಕಡಿಮೆ ಇದ್ದು ನಿಖರ ಸಂಖ್ಯೆ ತಿಳಿದುಬಂದಿಲ್ಲ. ಅಫ್ಘಾನಿಸ್ತಾನಕ್ಕಾಗಿ ತ್ಯಾಗ ಮಾಡಿದ ಅಮೆರಿಕ ಪಡೆಗೆ ಅಧ್ಯಕ್ಷ ಅಶ್ರಫ್ ಘನಿ ಧನ್ಯವಾದ ತಿಳಿಸಿದ್ದಾರೆ. ಟ್ರಂಪ್ ಅಧ್ಯಕ್ಷತೆಯಲ್ಲಿ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ ಎಂದೂ ಅವರು ಹೇಳಿದ್ದಾರೆ.