ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ನೊಂದವರ ಸಮಸ್ಯೆಗಳನ್ನು ಪರಿಹರಿಸಿ

ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ನೊಂದವರ ಸಮಸ್ಯೆಗಳನ್ನು ಪರಿಹರಿಸಿ Resolve the problems of the aggrieved impartially, honestly, and loyally

ಲೋಕದರ್ಶನ ವರದಿ 

           ಹಾವೇರಿ 02 : ಕಚೇರಿಗೆ ನೊಂದು ಬಂದವರಿಗೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಅವರ ತೊಂದರೆಯನ್ನ ಬಗೆಹರಿಸಿಕೊಡುವುದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ ಎಂದು ನಿವೃತ್ತ ಮಹಿಳಾ ಎ ಎಸ್ ಐ ಸುರೇಖಾ ಎಸ್ ರಾಯ್ಕರ್ ಹೇಳಿದರು. ನಗರದ ಕೆರಿಮತ್ತಿಹಳ್ಳಿಯ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಪ್ರಿಲ್ 02 ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಮಾಡುತ್ತೇವೆ ಇದರ ಮುಖ್ಯ ಉದ್ದೇಶ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವ ಸನ್ಮಾನ ನೀಡುವುದಾಗಿದೆ. ಪೊಲೀಸರಿಗೆ ಅವರ ಕರ್ತವ್ಯ ಪ್ರಜ್ಞೆ ಅರಿವಿಗಿದೆ, ಸಮಾಜವನ್ನು ಹೇಗೆ ಶಾಂತತೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆ ಅವರಲ್ಲಿದೆ, ಇಂದು ಇಲಾಖೆಗೆ ಸಾಕಷ್ಟು ಸೌಲಭ್ಯಗಳಿವೆ ಮಾಹಿತಿ ತಂತ್ರಜ್ಞಾನವಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಕೆಲಸ ಮಾಡಿ. ಮೊಬೈಲ್ ಎಂಬ ಸಾಧನ ಎಲ್ಲವನ್ನು ಸುಲಭಗೋಳಿಸಿದೆ ಅದರ ಸರಿಯಾದ ವಿನಿಯೋಗ ಮಾಡಿಕೊಂಡರೆ ಇಡೀ ಪ್ರಪಂಚವನ್ನೇ ನಾವು ಕಾಣಬಹುದು ಇದು ಇಲಾಖೆಯ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.  

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಲ್ ವಾಯ್ ಶಿರಕೋಳ ರವರು ವರದಿ ವಾಚನ ನೀಡಿ, ಕರ್ನಾಟಕ ಪೊಲೀಸ್ ಆಕ್ಟ್‌ ಜಾರಿಯಾದ ನಂತರ ಏಪ್ರಿಲ್ 02 ಪೊಲೀಸ್ ದ್ವಜ ದಿನಾಚರಣೆ ಮತ್ತು ಅಕ್ಟೋಬರ್ 21 ಹುತಾತ್ಮ ದಿನಾಚರಣೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಏಪ್ರಿಲ್ 2 ರ ಪೊಲೀಸ್ ದ್ವಜ ದಿನಾಚರಣೆಯ ಮುಖ್ಯ ಉದ್ದೇಶ ಧ್ವಜಗಳನ್ನ ಮಾರಾಟ ಮಾಡುವ ಮೂಲಕ ನಿವೃತ್ತ ಅಧಿಕಾರಿಗಳಿಗೆ ಒಂದು ಗೌರವ ಸಲ್ಲಿಸುವ ಕಾರ್ಯವಾಗಿದೆ. ಇಂದು ಸಮಾಜದಲ್ಲಿ ವಿವಿಧ ವರ್ಗದವರು ವಿವಿಧ ದಿನಾಚರಣೆಗಳನ್ನು ಆಚರಿಸಿಕೊಳ್ಳುತ್ತಾರೆ ಆದರೆ ಪೊಲೀಸರಿಗಾಗಿ ಯಾವುದೇ ದಿನಾಚರಣೆಗಳಿಲ್ಲ ನಾವು ಇನ್ನೊಬ್ಬರಿಗಾಗಿ ನಮ್ಮ ಎರಡು ಕಾರ್ಯಕ್ರಮಗಳನ್ನು ಮಾಡುತ್ತೇವೆ, ಅದು ಒಂದು ನಿವೃತ್ತರಾದವರಿಗೆ ಮತ್ತೊಂದು ಮಡಿದವರಿಗಾಗಿ ಎಂದರು. 

ಪೊಲೀಸ ಸೇವೆಗಳು ನಕಾರಾತ್ಮಕವಾಗಿ ಪ್ರಾರಂಭವಾಗುತ್ತವೆ ಹೊರತು ಯಾವುದು ಒಳ್ಳೆ ಕೆಲಸದಿಂದ ಪ್ರಾರಂಭವಾಗುವುದಿಲ್ಲ ಸಮಾಜದಲ್ಲಿ ದಿನನಿತ್ಯ ಜಗಳ, ಅಪಘಾತ, ಕೊಲೆ, ಸುಲಿಗೆ, ಕಳ್ಳತನ ಹೀಗೆ ವಿವಿಧ ಹಂತದ ನಕಾರಾತ್ಮಕಗಳನ್ನು ಶಮನಗೊಳಿಸಲು ಕೆಲಸ ಮಾಡುತ್ತೇವೆ ನಿತ್ಯ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ದ್ವಜ ದಿನಾಚರಣೆ ಮಾಡುತ್ತೇವೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ​‍್ಿಸಲಾಗುವುದು.

           ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯವನ್ನು ನೀಡಲಾಗುತ್ತದೆ. ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ದಿನಾಂಕ 31-03-2026 ರ ಅಂತ್ಯಕ್ಕೆ ಪೊಲೀಸ್ ದ್ವಜ ಮಾರಾಟ ಮಾಡಿ ಬಂದಂತಹ ಹಣ ರೂ. 15.78 ಲಕ್ಷ, ಇದರಲ್ಲಿ ರೂ. 50 ಸಾವಿರ ಗಳನ್ನು ಮರಣೋತ್ತರ ಪರಿಹಾರವಾಗಿ ನೀಡಲಾಗುತ್ತದೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ರೂ. 8.96 ಲಕ್ಷ ಒದಗಿಸಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ ಆರ್ ಪಿ ಐ ಶಂಕರಗೌಡ ಪಾಟೀಲ್ ಅವರು ಪೊಲೀಸ್ ಪಡೆಗಳ ಪಥ ಸಂಚಲನದ ನೇತೃತ್ವ ವಹಿಸಿದ್ದರು.  ಇದೆ ಸಂದರ್ಭದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಹೊಂದಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಗ್ಗಾಂವ ಡಿ ವಾಯ್ ಎಸ್ ಪಿ ಕೆ ವಿ ಗುರುಶಾಂತಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಡಿ ವಾಯ್ ಎಸ್ ಪಿ, ಸಿ ಪಿ ಐ, ಪಿ ಎಸ್ ಐ, ಎ ಎಸ್ ಐ, ಪೊಲೀಸ್ ಸಿಬ್ಬಂದಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.