ಸಂಶೋಧನೆಗಳು ಸಮಾಜದ ಒಳಿತಿಗಾಗಿ ಇರಬೇಕು: ಡಾ.ಗುಡಸಿ

ಸಂಶೋಧನೆಗಳು ಸಮಾಜದ ಒಳಿತಿಗಾಗಿ ಇರಬೇಕು: ಡಾ.ಗುಡಸಿ Research should be for the benefit of society: Dr.Gudasi

ಧಾರವಾಡ 03: ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆಗಳು ಸಾಮಾನ್ಯ ಜನರಿಗೂ ತಲುಪಬೇಕು. ಒಳ್ಳೆಯ ಪ್ರತಿಭಾನ್ವಿತ ಸಂಶೋಧನಾ ವಿದ್ಯಾರ್ಥಿಗಳಿದ್ದರೆ ವಿಶ್ವವಿದ್ಯಾಲಯ, ಪ್ರಾಧ್ಯಾಪಕರಿಗೆ ಹಾಗೂ ಮಾರ್ಗದರ್ಶನ ಮಾಡಿದವರಿಗೂ ಸ್ಪೂರ್ತಿ ಬರಲು ಸಾಧ್ಯ. ಸಂಶೋಧನೆಗಳು ಸಮಾಜದ ಒಳಿತಿಗಾಗಿ ಇರಬೇಕು ಎಂದು ಕ.ವಿ.ವಿ ವಿಶ್ರಾಂತ ಉಪಕುಲಪತಿ ಡಾ ಕೆ. ಬಿ. ಗುಡಸಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ ಶರಣಪ್ಪ ತೋಟಪ್ಪ ನಂದಿಬೇವೂರ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಯುವ ವಿಜ್ಞಾನಿ ಪ್ರಶಸ್ತಿ-2025’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು 

ಡಾ. ಎಸ್‌. ಟಿ. ನಂದಿಬೇವೂರ ರಸಾಯನಶಾಸ್ತ್ರದ ಪ್ರತಿಭಾನ್ವಿತ ಪ್ರಾಧ್ಯಾಪಕರು. ಅವರು 60 ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸುಮಾರು 500ಕ್ಕೂ ಹೆಚ್ಚು ವೈಜ್ಞಾನಿಕ ಲೇಖನ ಬರೆದು, ಅಂತಾರಾಷ್ಟ್ರೀಯ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರೆ​‍್ಡಯಾಗಿದ್ದಾರೆ. ತಮ್ಮ ನಿವೃತ್ತಿ ಆದಾಯದ 50 ಲಕ್ಷ ರೂಪಾಯಿಯನ್ನು ಶಿಕ್ಷಣಕ್ಕೆ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು ಈ ಪ್ರಶಸ್ತಿ ಕೊಡುವ ಹಿನ್ನೆಲೆ ಹಾಗೂ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಅದು ಭವಿಷ್ಯದ ನಿಮ್ಮ ಸಾಧನೆಗೆ ಸ್ಫೂರ್ತಿಯಾಗುತ್ತದೆ ಎಂದರು. 

ಸಂಶೋಧನಾ ಮಾರ್ಗದರ್ಶಕರಾದ ರವಿ ಕಾಂಬಳೆ ಮಾತನಾಡಿ, ಕುಮಾರಿ ಮನೋಜ್ಞಾ ನಾಯಕ ಅವರಲ್ಲಿ ಸಂಶೋಧನೆ ಬಗ್ಗೆ ಇರುವ ಆಸಕ್ತಿ, ಅಭಿರುಚಿ ಅಗಾಧವಾದದ್ದು. ಅವರಲ್ಲಿರುವ ಛಲ ಹಾಗೂ ಬದ್ಧತೆ ಅನನ್ಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಮನೋಜ್ಞಾ  ನಾಯಕ ಸಂಶೋಧನಾ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ನಿರರ್ಗಳವಾಗಿ, ಸ್ಪಷ್ಟವಾಗಿ ಮಾತನಾಡಿದ್ದು ಸಂತಸದ ಸಂಗತಿ. ಇದು ಒಂದು ರೀತಿ ಕನ್ನಡದ ಸೇವೆಯೇ. ಇಂದು ವಿಜ್ಞಾನಿಗಳ ಸಂಶೋಧನೆಗಳು ಗ್ರಾಮೀಣ ಮಟ್ಟಕ್ಕೆ ತಲುಪದಿರುವುದು ವಿಷಾದವೆಂದು ಹೇಳಿದರು. 

ಪ್ರಶಸ್ತಿ ಪುರಸ್ಕೃತ ಕುಮಾರಿ ಮನೋಜ್ಞಾ ನಾಯಕ ಸನ್ಮಾನಕ್ಕೆ ಪ್ರತಿಕ್ರಿಯಿಸಿ, ಈ ಪ್ರಶಸ್ತಿ ನನ್ನ ಭವಿಷ್ಯದ ಸಂಶೋಧನೆಗೆ ಭರವಸೆ ನೀಡಿದೆ. ಇದು ನನ್ನ ವ್ಯಕ್ತಿಗತ ಸಾಧನೆ ಅಲ್ಲ. ಅದರ ಹಿಂದೆ ನನ್ನ ಗುರುಗಳ, ಪಾಲಕರ, ಸಹಪಾಠಿಗಳ ಶ್ರಮವೂ ಇದೆ. ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದರು. 

ವೇದಿಕೆಯಲ್ಲಿ ಉಪಸ್ಥಿರಿದ್ದ ಅರುಣಾ ನಂದಿಬೇವೂರ ಹಾಗೂ ಡಾ. ಎಸ್‌. ಟಿ. ನಂದಿಬೇವೂರು ದತ್ತಿ ಆಶಯ ಕುರಿತು ಮಾತನಾಡಿದರು. 

ಪ್ರಾರಂಭದಲ್ಲಿ ಶ್ರೀನಗರ ಭಜನಾ ಮಂಡಳದ ಸದಸ್ಯರಾದ ಹೇಮಲತಾ ನೇಕಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆತ್ಮಾನಂದ ಬಾಗೋಜಿ ಅತಿಥಿಗಳನ್ನು ಪರಿಚಯಿಸಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಡಾ. ಶೈಲಜಾ ತ. ಅಮರಶೆಟ್ಟಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಕೆ.ಎಚ್‌. ನಾಯಕ, ಮಾರ್ಕಂಡೇಯ ದೊಡಮನಿ, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ನಂದಿಬೇವೂರ ಪರಿವಾರದವರು ಉಪಸ್ಥಿತರಿದ್ದರು