ಅಕ್ರಮ ಮಾವಾ ಮಾರಾಟ ತಡೆಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ

ಅಕ್ರಮ ಮಾವಾ ಮಾರಾಟ ತಡೆಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ Request to the District Collector to conduct a comprehensive investigation to prevent illegal sale o

ವಿಜಯಪುರ 22 : ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿನ ಪಾನ್ ಶಾಪ್‌ಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ "ಮಾವಾ" (ತಂಬಾಕು ಮಿಶ್ರಿತ ಪದಾರ್ಥ) ಕುರಿತು ಸಮಗ್ರ ತನಿಖೆ ನಡೆಸಿ, ತಯಾರಿಕಾ ಘಟಕಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವುದು ಹಾಗೂ ಮಾವಾ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಆನಂದ ಕೆ ಅವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಲಕ್ಷ್ಮಣ ಕಂಬಾಗಿ ಮಾತನಾಡಿ, ವಿಜಯಪುರ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಪಾನ್ ಶಾಪ್‌ಗಳಲ್ಲಿ ಸದ್ದಿಲ್ಲದೆ ಮಾವಾ ತಂಬಾಕು ಮಾರಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕೆಲವು ಕಡೆಗಳಲ್ಲಿ ಮಾವಾದಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಕಲಬೆರಿಕೆ ಮಾಡಲಾಗುತ್ತಿದೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಇಂತಹ ಅಕ್ರಮ ಚಟುವಟಿಕೆಗಳು ಯುವಜನತೆಯ ಆರೋಗ್ಯ, ಭವಿಷ್ಯ ಹಾಗೂ ಸಮಾಜದ ಶಾಂತಿ-ಸುವ್ಯವಸ್ಥೆಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿವೆ. 

ಮಾವಾ ಸೇವನೆಯ ಚಟಕ್ಕೆ ಬಲಿಯಾದ ಅನೇಕ ಯುವಕರು ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಹಲ್ಲು ಮತ್ತು ಒಸಡು ಸಂಬಂಧಿತ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಸಹ ಈ ದುಶ್ಚಟಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ.ವಿಜಯಪುರ ಜಿಲ್ಲೆಯ ಎಲ್ಲಾ ಪಾನ್ ಶಾಪ್ ಗಳು, ಕಿರಾಣಿ ಅಂಗಡಿಗಳು ಹಾಗೂ ತಂಬಾಕು ಉತ್ಪನ್ನ ಮಾರಾಟ ಕೇಂದ್ರಗಳ ಮೇಲೆ ವಿಶೇಷ ದಾಳಿ ಹಾಗೂ ಪರೀಶೀಲನೆ ನಡೆಸಬೇಕು.

ಅಕ್ರಮವಾಗಿ ಮಾವಾ ತಯಾರಿಸುವ ಮತ್ತು ಪೂರೈಕೆ ಮಾಡುವ ಮಳಿಗೆಗಳು, ಗೋದಾಮುಗಳು ಹಾಗೂ ಉತ್ಪಾದನಾ ಕೇಂದ್ರಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಮಾವಾ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿ, ಗಾಂಜಾ ಅಥವಾ ಇತರೆ ಮಾದಕ ವಸ್ತುಗಳ ಕಲಬೆರಿಕೆ ಇರುವುದೇ ಎಂಬುದನ್ನು ಪರೀಶೀಲಿಸಬೇಕು. ಅಹಾರ ಸುರಕ್ಷತಾ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು.ಕಾನೂನು ಬಾಹಿರವಾಗಿ ಮಾವಾ ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಶಾಲಾ-ಕಾಲೇಜುಗಳ ಸುತ್ತಮುತ್ತ ಮಾವಾ ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಮಾವಾ ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ವಿಜಯಪುರ ಜಿಲ್ಲೆಯಲ್ಲಿ ಮಾವಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ನಲ್ಲಿನಬೇಕು.  ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿದ್ದು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ.ಹೀಗಾಗಿ, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಆರೋಗ್ಯ ಮತ್ತು ಯುವಜನರ ಭವಿಷ್ಯದ ಹಿತದೃಷ್ಟಿಯಿಂದ ತಕ್ಷಣ ಸಮಗ್ರ ತನಿಖೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯರು ಹಣಮಂತ ನಾಯ್ಕೋಡಿ, ಗೀರೀಶ ಕಲಘಟಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.