ಗ್ಯಾಸ್ ಏಜೆನ್ಸಿ ವಿತರಕರ ಅರ್ಜಿ ಕರೆಯುವಂತೆ ಆಗ್ರಹಿಸಿ ಮನವಿ

ಗ್ಯಾಸ್ ಏಜೆನ್ಸಿ ವಿತರಕರ ಅರ್ಜಿ ಕರೆಯುವಂತೆ ಆಗ್ರಹಿಸಿ ಮನವಿ  Request to invite applications from gas agency distributors

ತಾಳಿಕೋಟಿ 15 : ಪಟ್ಟಣದಲ್ಲಿ ಅಡುಗೆ ಅನೀಲ ವಿತರಕರು ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಆದಷ್ಟು ಬೇಗ ವಿತರಕರಿಗಾಗಿ ಅರ್ಜಿ ಕರೆಯಲು ಕ್ರಮ ವಹಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ) ಪದಾಧಿಕಾರಿಗಳು ತಹಸಿಲ್ದಾರ್ ಡಾ. ವಿನಯಾ ಹೂಗಾರ ಇವರಿಗೆ ಗುರುವಾರ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ತಾಳಿಕೋಟಿ ಪಟ್ಟಣದಲ್ಲಿ ಅಡುಗೆ ಅನೀಲ ವಿತರಕರು ಇಲ್ಲದೆ ಇರುವ ಕಾರಣ ತಾಲೂಕಿನ ಕಲಕೇರಿ ಗ್ರಾಮೀಣ ವಿತರಕರಿಂದ ಅಡುಗೆ ಅನೀಲವನ್ನು ವಿತರಿಸಲಾಗುತ್ತಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಜೊತೆಗೆ ನಗರ ಪ್ರದೇಶಕ್ಕೂ ವಿತರಣೆ ಮಾಡುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಲಾಗುತ್ತಿಲ್ಲ ಜೊತೆಗೆ ಹೆಚ್ಚುವರೆ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.  

ಗ್ಯಾಸ್ ಬುಕಿಂಗ್, ವಿತರಣೆಯಲ್ಲಿ ಹಾಗೂ ತುರ್ತು ಅವಶ್ಯಕತೆ ಸಂದರ್ಭದಲ್ಲಿ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುವಂಥಾಗಿದೆ ಆದಕಾರಣ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲು ಕ್ರಮವಿಸಬೇಕು ಜೊತೆಗೆ ಈಗಿರುವ ಗ್ರಾಮೀಣ ಭಾಗದ ವಿತರಕರು ಸರಿಯಾಗಿ ವಿತರಣೆ ಮಾಡಲು ಹಾಗೂ ಹೆಚ್ಚುವರಿ ಹಣ ವಸೂಲಿ ಮಾಡುವುದರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಲಾಗಿದೆ.  ಸಮಿತಿಯ ತಾಲೂಕ ಅಧ್ಯಕ್ಷ ರಮೇಶ ದೊಡಮನಿ ಸಾಸನೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ತೋಟದ ತಮದಡ್ಡಿ, ಕಾರ್ಯದರ್ಶಿ ಶಂಕ್ರ​‍್ಪ ದೊಡಮನಿ ಸಾಸನೂರ, ಶೇಕಪ್ಪ ಕಟ್ಟಿಮನಿ ಕಾರಗನೂರ, ಮಲ್ಲಪ್ಪ ಶಿರೋಳ ತಾಳಿಕೋಟಿ, ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಕಟ್ಟಿಮನಿ, ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಶೇಖಪ್ಪ ಮಾದರ ಇದ್ದರು.