ಧಾರ್ಮಿಕ ಕಾರ್ಯಕ್ರಮಗಳಿಂದ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಲು ಸಾಧ್ಯ : ಅಮೃತ ದೇಸಾಯಿ

ಧಾರ್ಮಿಕ ಕಾರ್ಯಕ್ರಮಗಳಿಂದ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಲು ಸಾಧ್ಯ : ಅಮೃತ ದೇಸಾಯಿ Religious programs can maintain social harmony: Amrita Desai

ಧಾರವಾಡ 19 : ಭಕ್ತಿ ಮತ್ತು ಶೃದ್ಧೆಯಿಂದ ಎಲ್ಲರೂ ಒಗ್ಗೂಡಿ ಮಾಡಿದಾಗ ಮಾತ್ರ ಜಾತ್ರೆಗಳು, ಉತ್ಸವಗಳು ಯಶಸ್ಸು ಕಾಣಲಿಕ್ಕೆ ಸಾಧ್ಯ.  ಅಂತಹ ಕಾರ್ಯವನ್ನು ಕುಮಾರೇಶ್ವರ ನಗರದ ಎಲ್ಲ ಗುರು-ಹಿರಿಯರು ಕಳೆದ ಮೂರು ದಿನಗಳಿಂದ ಅಚ್ಚು ಕಟ್ಟಾಗಿ ನೆರವೇರಿಸಿದ್ದೀರಿ.  ಈಶ್ವರ ದೇವಸ್ಥಾನದ ಆವರಣವನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಕ್ಕಾಗಿ ತಮಗೆ ಅಭಿನಂದಿಸುತ್ತೇನೆ ಎಂದು ಮಾಜಿ ಶಾಸಕರಾದ ಅಮೃತ ದೇಸಾಯಿ ಅವರು ಹೇಳಿದರು.   ಕುಮಾರೇಶ್ವರ ನಗರ ಅಭಿವೃದ್ಧಿ ಸಂಘದ ವತಿಯಿಂದ ದಿನಾಂಕ: 17.02.2026ರಂದು ಸಂಜೆ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದ ಹಾನಗಲ್ ಕುಮಾರ ಶಿವಯೋಗಿಗಳ ಮಂಟಪದಲ್ಲಿ ಮಹಾಶಿವರಾತ್ರಿ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಮೃತ ದೇಸಾಯಿ ಅವರು ಈಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಸದಾ ಕಂಕಣ ಬದ್ಧವಾಗಿದ್ದೇನೆ. ಇಂಥಹ ಧಾರ್ಮಿಕ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗುತ್ತಿರಬೇಕು, ಇದರಿಂದ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.   ಅಮ್ಮಿನಭಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಪೂಜ್ಯ ಷ.ಭ್ರ.ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತ ಲಿಂಗರೂಪದಲ್ಲಿರುವ ಈಶ್ವರ ಬೇಡಿದವರಿಗೆ ತಮ್ಮ ಇಷ್ಟಾರ್ಥಗಳನ್ನು ಕರುಣಿಸುವ ಮಹಾ ಶಕ್ತಿಶಾಲಿ.  ದೇವಸ್ಥಾನಗಳು, ಮಠಮಂದಿರಗಳು ಬರುವ ಭಕ್ತರಿಗೆ ಸಮಾಧಾನವನ್ನ, ಶಾಂತಿ-ನೆಮ್ಮದಿಯನ್ನು ಕರುಣಿಸುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ.  ಭಾರತೀಯ ಸಂಸ್ಕೃತಿಯಲ್ಲಿ ದೇವರ ಮನೆಯಿಲ್ಲದ ಯಾವುದೇ ಮನೆಗಳಿರುವುದಿಲ್ಲವೋ ಹಾಗೇ ಇಡೀ ವಿಶ್ವವನ್ನು ಒಂದು ಮನೆಯನ್ನಾಗಿ ಕಲ್ಪಿಸಿದಾಗ ವಿಶ್ವ ಎನ್ನುವ ಮನೆಗೆ ದೇವರ ಮನೆ ಯಾವುದೇಂದರೆ ಅದು ನಮ್ಮ ಭಾರತ ದೇಶವಾಗಿದೆ ಎಂದರು.  

ಮನುಷ್ಯ ಯಾವ ಸಂಪತ್ತನ್ನು ಗಳಿಸಬೇಕೆಂದರೆ, ಭಗವಂತನ ನಾಮಸ್ಮರಣೆಯನ್ನು ಮಾಡ್ತಾ, ಸದಾವಕಾಲ ಭಗವಂತನ ಚಿಂತನೆ ಮಾಡುತ್ತ ಮಾಡುತ್ತ ಏನ ತನ್ನ ಆತ್ಮದೊಳಗೆ, ಅಂತರಂಗದೊಳಗೆ ಆನಂದ ಸಿಗುತ್ತದೆಯಲ್ಲ ಅದುವೇ ನಿಜವಾದ ಸಂಪತ್ತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಮಾತನಾಡುತ್ತ ಶಿವನಾಮವನ್ನು ಯಾರು ಭಕ್ತಿಯಿಂದ ಜಪಿಸುತ್ತಾರೋ ಅಂಥವರಿಗೆ ಭಯವಿರುವುದಿಲ್ಲ. ಭಕ್ತರನ್ನು ಹರಸುವ ಶಿವನನ್ನು ಭಕ್ತಿ ಭಾವದಿಂದ ಉಪವಾಸವಿದ್ದು ಜಾಗರಣೆ ಮಾಡುತ್ತ ಮಹಾಶಿವರಾತ್ರಿಯನ್ನು ಆಚರಣೆ ಮಾಡುತ್ತ ಬರುತ್ತಿರುವುದು ನಮ್ಮ ಪರಂಪರೆಯ ಹಬ್ಬ-ಹರಿದಿನದ ಮಹತ್ವವನ್ನು ಸಾರುತ್ತವೆ ಎಂದರು.   ವೇದಿಕೆಯಲ್ಲಿ ಕಾರ್ಯದರ್ಶಿ ಜಿ.ಎಂ.ಹುಲ್ಲೂರ, ಸಹಕಾರ್ಯದರ್ಶಿ ಪ್ರಭುಲಿಂಗಸ್ವಾಮಿ ಹಿರೇಮಠ, ಖಜಾಂಚಿ ಬಸವರಾಜ ಕೊಂಗವಾಡ, ಸದಸ್ಯರಾದ ಪ್ರೊ.ಎಂ.ಈಶ್ವರಯ್ಯ, ಜೆ.ವಾಯ್‌.ತೋಟದ, ಎನ್‌.ಬಿ.ಪಾಟೀಲ, ಸಿದ್ಧಲಿಂಗೇಶ ಹೊಳೆಯಣ್ಣವರ ಹಾಗೂ ನೀಲಕಂಠ ವಾರಿ ಉಪಸ್ಥಿತರಿದ್ದರು.  ಪ್ರಕಾಶ ಬಾಳಿಕಾಯಿ ನಿರೂಪಿಸಿದರು.  ಕುಮಾರೇಶ್ವರ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಕಾಂತ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು.  ಎಮ್‌.ಡಿ.ಪಾಟೀಲ ಸ್ವಾಗತಿಸಿದರು.  ಬಸವರಾಜ ನಿಗದಿ ವಂದಿಸಿದರು.  ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳಿಂದ, ವಿದುಷಿ ಭಾರ್ಗವಿ ಕುಲಕರ್ಣಿ ಇವರ ಭಕ್ತಿ ಸಂಗೀತ ಹಾಗೂ ಡಾ. ರಶ್ಮೀ ಪಾಟೀಲ ಇವರಿಂದ ಭಾವಗೀತೆಗಳ ಕಾರ್ಯಕ್ರಮ ಜರುಗಿತು.  ವಿದ್ವಾನ್ ರೋಹಿತ್ ಎಸ್‌.ಎಚ್‌. ಮತ್ತು ತಂಡದಿಂದ ಹಾಗೂ ಕು.ಶ್ರಾವಣಿ ಜುಲಪಿ ಭರತನಾಟ್ಯ ಮತ್ತು ಕಾವೇರಿ ಕನ್ಯಾ ಗುರುಕುಲದ ವಿದ್ಯಾರ್ಥಿಗಳು ಭಜನ್‌ಗಳನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಡಾ.ರಾಜಕುಮಾರ ಮುಡಬಿ, ಜಗದೀಶ ಕಾಲೇಬಾಗ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹೂಗಾರ, ತಾಳದಲ್ಲಿ ಸಂತೋಷ ಅಳವಂಡಿ ಸಾಥ್ ಸಂಗತ ನೀಡಿದರು.