ಮಾನವ ಜೀವನ ಉನ್ನತಿಗೆ ಧರ್ಮ ಮುಖ್ಯ : ರಂಭಾಪುರಿ ಜಗದ್ಗುರು

ಮಾನವ ಜೀವನ ಉನ್ನತಿಗೆ ಧರ್ಮ ಮುಖ್ಯ : ರಂಭಾಪುರಿ ಜಗದ್ಗುರು Religion is important for the upliftment of human life: Rambhapuri Jagadguru

ಚಡಚಣ 21 : ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಮುಖ್ಯವಾಗಿದ್ದು, ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾಽ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.  ಸಮೀಪದ ಹಾವಿನಾಳ ಗ್ರಾಮದ ಚರಮೂರ್ತಿ ಮಠದ ಪೀಟಾಧ್ಯಕ್ಷ ಗುರು ವಿಜಯಮಹಾಂತೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ತುಲಾಭಾರ ಮತ್ತು ಪುರಾಣ ಮಹಾಮಂಗಲ ಸಮಾರಂಭದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.   

ಭಾರತ ಪುಣ್ಯಭೂಮಿಯಲ್ಲಿ ಅನೇಕ ಧರ್ಮಗಳಿವೆ. ಅವುಗಳೆಲ್ಲ ಮಾನವೀಯ ಮೌಲ್ಯಗಳನ್ನು ಉತ್ತಮ ಸರಿದಾರಿಯಲ್ಲಿರಿಸಿ ಜನಮನಕ್ಕೆ ಬೆಳಕನ್ನು ನೀಡಿ ಉದ್ಧರಿಸಿವೆ. ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ಶಿವನ ಪಂಚಮುಖಗಳಿಂದ ಅವತರಿಸಿ, ಶಿವನ ಅಪ್ಪಣೆಯ ಅನುಸಾರ ಭುವಿಯಲ್ಲಿ ಸುಪ್ರಸಿದ್ಧ ಲಿಂಗಗಳಲ್ಲಿ ಉದಯಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪನೆ ಮಾಡಿ, ಪಂಚ ಪೀಠಗಳನ್ನು ಕಟ್ಟಿ ಶಿವಾದ್ವಿತ ಸಿದ್ಧಾಂತವನ್ನು ಸ್ಥಿರಗೊಳಿಸಿ, ಇಷ್ಟಲಿಂಗದೀಕ್ಷೆ ಸರ್ವಮಾನ್ಯಗೊಳಿಸಿದರು. ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ.

ಮಾನವ ಧರ್ಮ ಪರಿಪಾಲನೆಯಿಂದ ಎಲ್ಲ ಧರ್ಮಗಳು ಉಳಿದು ಬೆಳೆಯಲು ಸಾಧ್ಯವಿದ್ದು ಜಗತ್ಕಲ್ಯಾಣಕ್ಕೆ ಮಾನವ ಧರ್ಮ ಪರಿಪಾಲನೆ ಅವಶ್ಯಕವಾಗಿದೆ. ಯಾವಾಗಲೂ ನಾಶವಾಗದೇ ಇರುವುದು ನಿಜವಾದ ಧರ್ಮ. ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ ಇಲ್ಲ ಪರಿಶುದ್ದ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮಪ್ರಜ್ಞೆ ಅವಶ್ಯಕ ಎಂದು ಹೇಳಿದರು.  ಜಾತಿ- ಜನಾಂಗಗಳ ಗಡಿ ಮೀರಿ ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಸಕಲರಿಗೂ ಹಿತಕಾರಿ, ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ವೀರಶೈವ ಧರ್ಮದ ರಾಷ್ಟ್ರೀಯ ಗುರುಪೀಠಗಳೆಂದು ಪ್ರಖ್ಯಾತಿ ಪಡೆದ ಪಂಚಪೀಠಗಳು ಸಾಮರಸ್ಯ ಸೌಹಾರ್ದತೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿವೆ.

ಹಾವಿನಾಳ ಗ್ರಾಮದ ಚರಮೂರ್ತಿ ಮಠವು ವಿಶಾಲವಾದ ಸ್ಥಳವನ್ನು ಹೊಂದಿದ್ದು, ಇಲ್ಲಿ ಗುರುಕುಲ ತೆರೆದರೆ ಈ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬಹುದು ಇಲ್ಲಿ ಗುರುಕುಲ ತೆರೆಯುವುದಾದರೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ 1 ಲಕ್ಷ ರೂ.ನೀಡುವುದಾಗಿ ಹೇಳಿದರು.  ಅಧ್ಯಕ್ಷತೆ ವಹಿಸಿದ ಹತ್ತಳ್ಳಿ-ಹಾವಿನಾಳ ಮಠದ ಗುರುಗುರುಪಾದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ ಮಾರಕವಾಗಬಾರದು. ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಪೂರ್ವಜರ ಅನುಭವದ ನುಡಿಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದು ಎಂದರು. 

ಹಾವಿನಾಳದ ಚರಮೂರ್ತಿ ಮಠದ ವಿಜಯಮಹಾಂತೇಶ್ವರ ಶಿವಾಚರ್ಯರು ನೇತೃತ್ವವನ್ನು ವಹಿಸಿದ್ದರು.   ಸಾನ್ನಿಧ್ಯ ವಹಿಸಿದ್ದ ಚಿಟಗುಪ್ಪಾದ ಗುರುಲಿಂಗ ಶಿವಾಚಾರ್ಯರು, ಹಿರೂರ-ತಾಳಿಕೋಟ ಹಿರೇಮಠದ ಜಯಸಿದ್ಧೇಶ್ವರ ಶೀವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರು, ರಾಣೆಬೆನ್ನೂರದ ಶಿವಯೋಗಿ ಶೀವಾಚಾರ್ಯರು, ಗುಡ್ಡಾಪೂರದ ಗುರುಪಾದ ಶಿವಾಚಾರ್ಯರು ಆಶಿರ್ವಚನ ನೀಡಿದರು.  ನಿವೃತ್ತ ಪ್ರಾಚಾರ್ಯ ಎಸ್‌.ಕೆ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು, ಬಾಳಾಸಾಹೇಬ ಗುಲಗಂಜಿಹಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಧರ್ಮ ಸಭೆಯಲ್ಲಿ ಚಡಚಣದ ಖ್ಯಾತ ಜವಳಿ ವ್ಯಾಪಾರಿ, ಅಜೀತ ಮುತ್ತೀನ, ಎಮ್‌.ಆರ್‌.ಪಾಟೀಲ (ಬಳ್ಳೊಳ್ಳಿ), ಸಿದ್ದಣ್ಣಸಾವುಕಾರ ಬಿರಾದಾರ, ಪ.ಪಂ.ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಡಾಽ ಎಸ್‌.ಆರ್‌. ಡೋಣಗಾಂವ, ಎಸ್‌.ಆರ್‌. ಅವಜಿ, ರವಿಗೌಡ ಪಾಟೀಲ, ಗಣಪತಿ ಬಾಣಿಕೋಲ, ಧಾನಮ್ಮಗೌಡತಿ ಪಾಟೀಲ ಸೇರಿದಂತೆ, ಸಾವಿರಾರು ಭಕ್ತರು ಇದ್ದರು.