ಮುಂದಿನ ಶೈಕ್ಷಣಿಕ ವರ್ಷದೊಳಗೆ 11ಸಾವಿರ ಶಿಕ್ಷಕರ ನೇಮಕಾತಿ ಪೂರ್ಣ: ಸಚಿವ ಎಸ್‌.ಮಧು ಬಂಗಾರಪ್ಪ

ಮುಂದಿನ ಶೈಕ್ಷಣಿಕ ವರ್ಷದೊಳಗೆ 11ಸಾವಿರ ಶಿಕ್ಷಕರ ನೇಮಕಾತಿ ಪೂರ್ಣ: ಸಚಿವ ಎಸ್‌.ಮಧು ಬಂಗಾರಪ್ಪ Recruitment of 11,000 teachers to be completed by next academic year: Minister S. Madhu Bangarappa

ಬೆಳಗಾವಿ ಸುವರ್ಣ ವಿಧಾನಸೌಧ ಡಿ.18: ಬರುವ ಶೈಕ್ಷಣಿಕ ವರ್ಷದೊಳಗೆ 11ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರಪ್ಪ ಹೇಳಿದರು. 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು  ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಕುರಿತು ಮಾಹಿತಿಯನ್ನು  ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. 

ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 178935 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 133345 ಹುದ್ದೆಗಳು ಭರ್ತಿಯಾಗಿದ್ದು, 45590 ಹುದ್ದೆಗಳು ಖಾಲಿ ಇರುತ್ತವೆ.  ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು. 

ರಾಜ್ಯದಲ್ಲಿ 5024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿರುತ್ತವೆ. ಈ  ಪೈಕಿ 32010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆಯಾಗಿ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆಯನ್ನು ಸರಿದೂರಿಸಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಅಲ್ಲದೇ ವಿಕಲಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. 

ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯಡಿ ಮೊಟ್ಟೆ ವಿತರಣೆ 

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 05 ದಿನ ಬೆಳಿಗ್ಗೆ ಬಿಸಿ ಹಾಲು, ಇದರೊಂದಿಗೆ ಮಿಕ್ಸ್‌ ರಾಗಿ ಮಾಲ್ಟ್‌, ಮಧ್ಯಾಹ್ನ ಬಿಸಿ ಊಟದೊಂದಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.  

ವಿದ್ಯಾವಿಕಾಸ ಯೋಜನೆಯಡಿ 1 ರಿಂದ 10ನೇ ತರಗತಿಯ ಮಕ್ಕಳಿಗೆ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಸಮವಸ್ತ್ರ ಸರಬರಾಜು  ಮಾಡಲು ಮೊದಲನೇ ಜೊತೆ ಸಮವಸ್ತ್ರಕ್ಕಾಗಿ ರೂ.83.07 ಕೋಟಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಜೊತೆ ಸಮವಸ್ತ್ರಕ್ಕಾಗಿ ರೂ. 80.66 ಕೋಟಿ ಲಭ್ಯವಿರುತ್ತದೆ ಎಂದರು. 

ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಒಂದು ದಿನದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕ ಸುರೇಶ್ ಕುಮಾರ್ ರವರು ಈಗಾಗಲೇ ಸಭಾಧ್ಯಕ್ಷರಿಗೆ ಪತ್ರ ನೀಡಿದ್ದು, ಶಿಕ್ಷಣ ವಿಷಯಕ್ಕೆ ಒಂದು ದಿನದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆದು, ಚರ್ಚೆಯಲ್ಲಿ ಹಿರಿಯ ಶಾಸಕರ ಸಲಹೆ-ಸೂಚನೆಗಳನ್ನು ಪಡೆದು ಅದರಂತೆ ಕ್ರಮ ವಹಿಸಲಾಗುವುದು ಎಂದರು. 

ಸರ್ಕಾರಿ ಶಾಲೆಗಳಲ್ಲಿ ದ್ವಿ-ಭಾಷಾ ಬೋಧನೆಗೆ ಕ್ರಮ 

ಆಂಗ್ಲ  ಮಾಧ್ಯಮ ಶಿಕ್ಷಕರ ಇಂಡಕ್ಷನ್ ಕಾರ್ಯಕ್ರಮ ತರಬೇತಿಯು ಸರ್ಕಾರಿ ಶಾಲಾ ಶಿಕ್ಷಕರನ್ನು ಆಂಗ್ಲ ಮಾಧ್ಯಮ ವಿಭಾಗಗಳಿಗೆ ಸಜ್ಜುಗೊಳಿಸಲು ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದ ವೈವಿದ್ಯಮಯ ಕಲಿಯುವವರಿಗೆ ಆಂಗ್ಲ ಭಾಷಾ ಪ್ರಾವೀಣ್ಯತೆ, ಆತ್ಮವಿಶ್ವಾಸ, ಡಿಜಿಟಲ್ ಕೌಶಲ್ಯಗಳು ಮತ್ತು ಬೋಧನಾ ವಿಧಾನಗಳನ್ನು ರೂಪಿಸುವತ್ತ ಗಮನಹರಿಸಿ, ತರಗತಿಯ ಬೋಧನೆ ಮತ್ತು ಆಂಗ್ಲ ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ಸಾಲಿನವರಗೆ ಎಲ್ಲಾ ಶಿಕ್ಷಕರನ್ನು ದ್ವಿ-ಭಾಷಾ ಮಾಧ್ಯಮ ಬೋಧನೆಗೆ ತರಬೇತುಗೊಳಿಸಲು ಯೋಜಿಸಲಾಗುತ್ತಿದೆ. 

2025-26ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳಿಗೆ ಹಾಗೂ ರಾಜ್ಯದ ಇತರೆ ಭಾಗದಲ್ಲಿ ಖಾಲಿ ಇರುವ 5000 ಹುದ್ದೆಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದ್ದು, ಸದರಿ ಹುದ್ದೆಗಳಲ್ಲಿ ದ್ವಿ-ಭಾಷಾ ಮಾಧ್ಯಮ ಭೋಧನೆಗೆ ಶಿಕ್ಷಕರನ್ನು ನಿಯಮಾನುಸಾರ ನೇಮಕ ಮಾಡಲು ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರ​‍್ಪ ಹೇಳಿದರು.