ದೇವರಾಜ ಅರಸರಿಗೆ ಭಾರತ ರತ್ನ ಶಿಫಾರಸು: ಉಗ್ರ​‍್ಪ

ದೇವರಾಜ ಅರಸರಿಗೆ ಭಾರತ ರತ್ನ ಶಿಫಾರಸು: ಉಗ್ರ​‍್ಪ  Recommendation of Bharat Ratna for Devaraj Urs: Ugrappa


ಬಳ್ಳಾರಿ, ಆ. 21: ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸರ ಕಲ್ಪಳ್ಳಿ ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಿ, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮಾಜಿ ಸಂಸದ ವಿ.ಎಸ್‌. ಉಗ್ರ​‍್ಪ ಒತ್ತಾಯಿಸಿದರು.  

ನಗರದ ಡಾ. ರಾಜ್‌ಕುಮಾರ್ ರಸ್ತೆಯ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಪಳ್ಳಿಯಲ್ಲಿರುವ ದೇವರಾಜ ಅರಸರ ಮನೆ, ತೋಟ ಹಾಗೂ ಸಮಾಧಿಗಳು ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯಲ್ಲಿವೆ. ಸರ್ಕಾರ ಕೂಡಲೇ ಅಭಿವೃದ್ಧಿ ಕಾರ್ಯ ಕೈಗೊಂಡು ಮನೆಯನ್ನು ಅಧಿಕೃತ ಸ್ಮಾರಕವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.  

ದೇವರಾಜ ಅರಸರು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಪಳ್ಳಿಯಲ್ಲಿ ನೂರಾರು ಎಕರೆ ಜಮೀನು ಹೊಂದಿದ್ದರೂ ಸ್ವತಃ ಕೃಷಿ ಮಾಡುತ್ತಾ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಿದ ಜನಪರ ರಾಜಕಾರಣಿಯಾಗಿದ್ದರು. ಇಂದಿರಾ ಗಾಂಧಿಯವರ ವಿಚಾರಧಾರೆ ಮತ್ತು ಕಾರ್ಯಕ್ರಮಗಳಿಂದ ಪ್ರೇರಿತರಾಗಿದ್ದ ಅವರು, ಕಾಂಗ್ರೆಸ್ ವಿಭಜನೆಯ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್ ಪರ ನಿಂತು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿದ್ದರು ಎಂದು ಉಗ್ರ​‍್ಪ ಹೇಳಿದರು.  

1972ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ತಂದು ಮುಖ್ಯಮಂತ್ರಿಯಾದ ದೇವರಾಜ ಅರಸರು, ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಯುವಕರಿಗೆ ರಾಜಕೀಯ ಅವಕಾಶ ಕಲ್ಪಿಸಿದರು. ಅವರ ಆಡಳಿತದಲ್ಲಿ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಬಡವರ ಬದುಕಿಗೆ ಹೊಸ ದಿಕ್ಕು ದೊರೆಯಿತು ಎಂದರು.  

1972ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದು, ಎಲ್‌.ಜಿ. ಹಾವನೂರು ಆಯೋಗ ರಚಿಸಿ ವರದಿ ಪಡೆದು ಸಾಮಾಜಿಕ ನ್ಯಾಯಕ್ಕೆ ಮಹತ್ವ ನೀಡಿದ್ದು, 1974ರ ಭೂ ಸುಧಾರಣಾ ಕಾಯ್ದೆಯ ಮೂಲಕ ‘ಉಳುವವನೇ ಭೂಮಿಯ ಒಡೆಯ’ ಆಶಯವನ್ನು ಸಾಕಾರಗೊಳಿಸಿದ್ದು ಸೇರಿದಂತೆ ಹಲವು ಜನಪರ ಕ್ರಮಗಳನ್ನು ಅರಸರು ಜಾರಿಗೆ ತಂದಿದ್ದರು ಎಂದು ಉಗ್ರ​‍್ಪ ವಿವರಿಸಿದರು.  

ಕಲ್ಪಳ್ಳಿಯಲ್ಲಿರುವ ದೇವರಾಜ ಅರಸರ ಮನೆ, ತೋಟ ಮತ್ತು ಸಮಾಧಿಗಳನ್ನು ಸಂರಕ್ಷಿಸಿ, ಮನೆಯನ್ನು ಅಧಿಕೃತ ಸ್ಮಾರಕವನ್ನಾಗಿ ಘೋಷಿಸಿ ಸಾಮಾಜಿಕ ನ್ಯಾಯದ ಅಧ್ಯಯನ ಹಾಗೂ ಜಾಗೃತಿ ಕೇಂದ್ರವಾಗಿ ರೂಪಿಸಬೇಕು. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರೀದೀಪವಾಗುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ಡಿ. ದೇವರಾಜ ಅರಸರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಲ್ಲುಕಂಬ ಪಂಪಾಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.