ರೈತರ ಹಿತ ಕಾಪಾಡಲು ಯಾವ ತ್ಯಾಗಕ್ಕೂ ಸಿದ್ಧ: ಶಾಸಕ ನಾಡಗೌಡ

ರೈತರ ಹಿತ ಕಾಪಾಡಲು ಯಾವ ತ್ಯಾಗಕ್ಕೂ ಸಿದ್ಧ: ಶಾಸಕ ನಾಡಗೌಡ  Ready to make any sacrifice to protect farmers' interests: MLA Nadagouda


ತಾಳಿಕೋಟಿ 09: ವಿಜಯಪುರ ಜಿಲ್ಲೆಯ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳನ್ನು ಕೈಬಿಟ್ಟಿರುವುದು ನೋವುಂಟು ಮಾಡಿದೆ. ರೈತರ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಿದ್ದು, ಎರಡೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಹೇಳಿದರು. ತಾಳಿಕೋಟಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸುವ ವಿಶ್ವಾಸವಿದೆ.

ರೈತರು ಸಹನೆ ಕಳೆದುಕೊಳ್ಳಬಾರದು ಎಂದರು. ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು. ರೈತರಿಗೆ ಯಾವುದೇ ಪಕ್ಷವಿಲ್ಲ; ಅವರ ಹಿತವೇ ಮುಖ್ಯ. ರೈತರು ಸುಖವಾಗಿದ್ದರೆ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ತಾನೂ ರೈತ ಕುಟುಂಬದ ಸದಸ್ಯನಾಗಿರುವುದರಿಂದ ರೈತರ ಸಂಕಷ್ಟದ ಅರಿವಿದೆ ಎಂದು ನಾಡಗೌಡ ಹೇಳಿದರು. ಬಿಜೆಪಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಹಾಗೂ ಮುಖಂಡ ಬಸನಗೌಡ ಪಾಟೀಲ  ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್‌. ಪಾಟೀಲ (ಯಾಳಗಿ), ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್, ರೈತ ಸಂಘ ತಾಲೂಕು ಅಧ್ಯಕ್ಷ ಬಾಳಪ್ಪಗೌಡ ಲಿಂಗದಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.