ಮಹಿಳಾ ರತ್ನ, ಆದರ್ಶ ದಂಪತಿ ಪ್ರಶಸ್ತಿ ಪ್ರದಾನ

ಮಹಿಳಾ ರತ್ನ, ಆದರ್ಶ ದಂಪತಿ ಪ್ರಶಸ್ತಿ ಪ್ರದಾನ  Ratna, Adarsh ​​Dampati award presentation

ಬೆಳಗಾವಿ 20: ಅಪ್ರತಿಮ ವಾಗ್ಮಿ, ಅಪೂರ್ವ ಮಹಿಳಾ ಸಾಧಕಿ ದಿ. ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ 64ನೆಯ ಸ್ಮರಣೆಯ ನಿಮಿತ್ಯ ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಮಹಿಳಾ ರತ್ನ ಹಾಗೂ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ. ಸಾನಿಧ್ಯವನ್ನು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. 

ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಹಾಗು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ಬಾರಿಯ ಮಹಿಳಾ ರತ್ನ ಪ್ರಶಸ್ತಿ ಭಾರತೀಯ ಸಂಗೀತ ಕುರಿತು ಖಚಿತವಾಗಿ ಮಾತನಾಡಬಲ್ಲ ಕರ್ನಾಟಕದ ವಿರಳ ವಿದ್ವಾಂಸರಲ್ಲಿ ಒಬ್ಬರಾಗಿರುವ ಡಾ. ರೋಹಿಣಿ ಗಂಗಾಧರಯ್ಯ ಅವರಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರಸಕ್ತ ಸಾಲಿನಿಂದ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಹಾಗೂ ರಾವ್ ಬಹದ್ದೂರ್ ಷಣ್ಮುಖಪ್ಪ ಅಂಗಡಿ ಅವರ ನೆನಹಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ಈ ಬಾರಿಯ ಆದರ್ಶ ದಂಪತಿ ಪ್ರಶಸ್ತಿಗೆ ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕೆ.ವಿ. ನಾಗರಾಜಮೂರ್ತಿ ಹಾಗೂ ಹೆಸರಾಂತ ಹಿರಿಯ ಪತ್ರಕರ್ತೆ ಸಂಪಾದಕಿ ಎಸ್‌. ಜಿ. ತುಂಗರೇಣುಕಾ ದಂಪತಿ ಭಾಜನರಾಗಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.