ಅಪರೂಪದ ಲಿವರ್ ಕ್ಯಾನ್ಸರ್ ಗಡ್ಡೆ ಯಶಸ್ವಿಯಾಗಿ ತೆರವು: 56 ವರ್ಷದ ಮಹಿಳೆಗೆ ಸಂಕೀರ್ಣ ಶಸ್ತ್ರಚಿಕಿತ್ಸೆ

ಅಪರೂಪದ ಲಿವರ್ ಕ್ಯಾನ್ಸರ್ ಗಡ್ಡೆ ಯಶಸ್ವಿಯಾಗಿ ತೆರವು: 56 ವರ್ಷದ ಮಹಿಳೆಗೆ ಸಂಕೀರ್ಣ ಶಸ್ತ್ರಚಿಕಿತ್ಸೆ Rare Liver Cancer Tumor Successfully Removed at SS Narayana Health Super Speciality Centre

ಲೋಕದರ್ಶನ ವರದಿ

ದಾವಣಗೆರೆ, ಆಗಸ್ಟ್ 19: ಅಪರೂಪದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ದಾವಣಗೆರೆಯ ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ವೈದ್ಯರು ಸುಮಾರು ಆರು ಗಂಟೆಗಳ ಕಾಲ ನಡೆಸಿದ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ.

ಚಿತ್ರದುರ್ಗ ಮೂಲದ ಮಹಿಳೆ ಬೊಜ್ಜು, ಟೈಪ್–2 ಮಧುಮೇಹ ಹಾಗೂ ಹೈಪೋಥೈರಾಯ್ಡಿಸಂ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ನಿರಂತರ ಹೊಟ್ಟೆನೋವು ಹಾಗೂ ಹಸಿವಾಗದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಕ್ಲಿನಿಕ್‌ಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ನಡೆಸಿದ ತಪಾಸಣೆಯಲ್ಲಿ ಲಿವರ್‌ನಲ್ಲಿ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯ ಹಿನ್ನೆಲೆಯಲ್ಲಿ ಈ ಹಿಂದೆ ಗಡ್ಡೆಯನ್ನು ತೆರವುಗೊಳಿಸಲು ವೈದ್ಯರು ಹಿಂದೇಟು ಹಾಕಿದ್ದರು.

ನಂತರ ದಾವಣಗೆರೆಯ ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ಗೆ ಭೇಟಿ ನೀಡಿದ ಅವರು, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯಕ್ ಅವರನ್ನು ಸಂಪರ್ಕಿಸಿದರು. ಸ್ಕ್ಯಾನಿಂಗ್ ಸೇರಿದಂತೆ ಸಮಗ್ರ ತಪಾಸಣೆ ನಡೆಸಿದಾಗ ಲಿವರ್‌ನ ಎಡಭಾಗದ ಆಳದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಹೆಚ್ಚಿನ ಪರೀಕ್ಷೆಗಳ ಬಳಿಕ ಇದನ್ನು ಇಂಟ್ರಾಹೆಪಾಟಿಕ್ ಚೋಲಾಂಜಿಯೊಕಾರ್ಸಿನೋಮಾ (Intrahepatic Cholangiocarcinoma) ಎಂಬ ಅಪರೂಪದ ಲಿವರ್ ಕ್ಯಾನ್ಸರ್ ಎಂದು ದೃಢಪಡಿಸಲಾಯಿತು.

ಸುಮಾರು 95 ಕೆ.ಜಿ. ತೂಕ ಹೊಂದಿದ್ದ ಮಹಿಳೆಗೆ ಬೊಜ್ಜು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿದ್ದ ಕಾರಣ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನದ್ದಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೂ ಮುನ್ನ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಪರೀಕ್ಷೆಗಳನ್ನು ನಡೆಸಲಾಯಿತು.

ಡಾ. ಹನುಮಂತ ನಾಯಕ್ ನೇತೃತ್ವದ ತಂಡ ಸುಮಾರು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿತು. ಈ ಸಂದರ್ಭದಲ್ಲಿ ಪಿತ್ತಕೋಶದ ಜೊತೆಗೆ ಲಿವರ್‌ನ II, III, IVa ಮತ್ತು IVb ಭಾಗಗಳನ್ನು ಒಳಗೊಂಡ ಮೇಜರ್ ಎಡ ಹೆಪಟೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಅತ್ಯಂತ ಎಚ್ಚರಿಕೆಯಿಂದ ಸಂರಕ್ಷಿಸಲಾಯಿತು.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ವೇಗವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆ ಮುಗಿದ ಸುಮಾರು ಆರು ಗಂಟೆಗಳಲ್ಲೇ ದ್ರವಾಹಾರ ಸೇವಿಸಲು ಆರಂಭಿಸಿದ ಅವರು, ನಂತರ ಕ್ರಮೇಣ ಮೃದು ಆಹಾರ ಸೇವಿಸುವ ಹಂತಕ್ಕೆ ತಲುಪಿದರು. ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಕೇವಲ ಐದು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಡಾ. ಆರ್.ಕೆ. ಹನುಮಂತ ನಾಯಕ್, “ಟ್ಯೂಮರ್‌ನ ಗಾತ್ರ ಮತ್ತು ಅದು ಇದ್ದ ಸ್ಥಳದ ಜೊತೆಗೆ ರೋಗಿಯ ಬೊಜ್ಜು ಹಾಗೂ ಇತರೆ ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆರೋಗ್ಯಕರ ಲಿವರ್ ಅನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನದ ಸೂಕ್ತ ಮೌಲ್ಯಮಾಪನ, ನಿಖರವಾದ ಯೋಜನೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ವ್ಯವಸ್ಥಿತ ಆರೈಕೆ ಈ ಯಶಸ್ಸಿಗೆ ಕಾರಣವಾಯಿತು,” ಎಂದು ಹೇಳಿದರು.

ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ಮಾತನಾಡಿ, “ಹೆಚ್ಚಿನ ಅಪಾಯದಲ್ಲಿದ್ದ ರೋಗಿಗೆ ಇಂತಹ ಸಂಕೀರ್ಣ ಲಿವರ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದು ನಮ್ಮ ಶಸ್ತ್ರಚಿಕಿತ್ಸಾ ತಂಡದ ಪರಿಣತಿ ಹಾಗೂ ವಿವಿಧ ವಿಭಾಗಗಳ ವೈದ್ಯರ ಸಮನ್ವಯದ ಆರೈಕೆಯ ಮಹತ್ವವನ್ನು ತೋರಿಸುತ್ತದೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಸುಧಾರಿತ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ,” ಎಂದು ತಿಳಿಸಿದರು.