ತಾಯಿಯ ಸಹಾಯದಿಂದಲೇ ಪುತ್ರಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬೆಂಗಳೂರು, ಫೆ.6 ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಸ್ನೇಹಿತನೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿರುವ ಆಘಾತಕಾಗಿ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಪ್ರಕರಣವನ್ನು ಮುಚ್ಚಿ ಹಾಕಲು ತಾಯಿ ಪ್ರಯತ್ನಿಸಿದ್ದು, ಇದರಿಂದ ಬಾಲಕಿ ವಿಷಯವನ್ನು ಅಜ್ಜಿಯೊಂದಿಗೆ ಹೇಳಿಕೊಂಡಿದ್ದಾರೆ. ಅಜ್ಜಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅತ್ಯಾಚಾರ ಆರೋಪಿ ವಿನಯ್(22)  ಎಂಬಾತನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ 7ನೇ ತರಗತಿ  ಓದುತ್ತಿದ್ದು, ತಾಯಿ ತನ್ನ ಗಂಡನನ್ನು ತೊರೆದು 10 ವರ್ಷಗಳಿಂದ ಬೇರೆಯೇ ವಾಸ  ಮಾಡುತ್ತಿದ್ದಾಳೆ. ತಾಯಿ ಜೊತೆ ಬಾಲಕಿ ಕೂಡ ವಾಸಿಸುತ್ತಿದ್ದಳು. ಕಲ್ಯಾಣ ಮಂಟಪ  ಹಾಲ್‌ನಲ್ಲಿ ತಾಯಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಈಕೆಗೆ ಆರೋಪಿ ವಿನಯ್  ಎಂಬಾತನ ಪರಿಚಯವಾಗಿದೆ. ಆಟೋ ಚಾಲಕನಾಗಿರುವ ವಿನಯ್‌ಗೆ ದರೋಡೆ ಪ್ರಕರಣದ ಆರೋಪಿಯೂ ಆಗಿದ್ದಾನೆ.ತಾಯಿ ಹಾಗೂ ವಿನಯ್ ಇಬ್ಬರೂ ಮನೆಗೆ ಮದ್ಯಪಾನ ಮಾಡಿ ಬರುತ್ತಿದ್ದರು. ಆ ನಂತರ ತಾಯಿ ವಿನಯ್  ಜೊತೆ ಮಲಗುವಂತೆ ಒತ್ತಾಯ ಮಾಡುತ್ತಿದ್ದಳು. ಅಲ್ಲದೆ ತಾಯಿ, ಊಟದಲ್ಲಿ ಮತ್ತು ಬರುವ  ಪದಾರ್ಥ ಹಾಕಿ ಕೊಡುತ್ತಿದ್ದಳು ಎಂದು ಬಾಲಕಿ ಪೊಲೀಸರ ಬಳಿ ಹೇಳಿದ್ದಾಳೆ.

ಕಳೆದ ಒಂದು  ವರ್ಷಗಳಿಂದ ವಿನಯ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಆರೋಗ್ಯದಲ್ಲಿ ಏರು ಪೇರು ಉಂಟಾದ ಬಳಿಕ  ಆತನ ಮನೆಗೆ ಬರುವುದನ್ನು ನಿಲ್ಲಿಸಿದ್ದಾನೆ. ದರೋಡೆ ಪ್ರಕರಣ ಸಂಬಂಧ ಆರೋಪಿ ವಿನಯ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ  ನಡೆಸುತ್ತಿದ್ದಾರೆ. ಬಾಲಕಿಯ ತಾಯಿ ಅನಾರೋಗ್ಯ ಪೀಡಿತರಾಗಿರುವುದರಿಂದ ಆಕೆಯನ್ನೂ ಇನ್ನೂ ಬಂಧಿಸಿಲ್ಲ. ಗುಣಮುಖರಾದ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.