ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 30ವರ್ಷ ಜೈಲು, ಹತ್ತುಸಾವಿರ ದಂಡ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 30ವರ್ಷ ಜೈಲು, ಹತ್ತುಸಾವಿರ ದಂಡ Rape of minor girl: Accused gets 30 years in jail, fine of ten thousand

ಬೆಳಗಾವಿ 03: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಚಾರವೆಸಗಿದ್ದ ಆರೋಪಿಗೆ 30ವರ್ಷ ಜೈಲು ಶಿಕ್ಷೆ ಮತ್ತು 10,000ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಸಿ.ಎಮ್‌.ಪುಷ್ಪಲತಾ ಅವರು ತೀರ್ಪು ನೀಡಿದ್ದಾರೆ. 

ಗುಗ್ರಾನಟ್ಟಿ ಗ್ರಾಮದ ಬಸವರಾಜ ಮಾರುತಿ ಶಿಂದೋಳಕರ ಶಿಕ್ಷೆಯಾದ ಅಪರಾಧಿಯಾಗಿದ್ದಾನೆ. 

ಪ್ರಕರಣ ವಿವರ: ಇಸ್ವಿ 2021ರಲ್ಲಿ ಬಸವರಾಜ ಶಿಂದೋಳಕರ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಅತ್ಯಚಾರವೆಸಗಿದ್ದ ಬಗ್ಗೆ ಬೆಳಗಾವಿ ನಗರದ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಕಾಕತಿ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದರು. ಅಲ್ಲದೆ ತನಿಖೆ ಮಾಡಿ ಆರೋಪಿಯ ವಿರುದ್ಧ ಎಲ್ಲ ಮಹತ್ವದ ಪುರಾವೆ, ಸಾಕ್ಷಿಗಳನ್ನು ಅತೀ ಜಾಗರೂಕತೆಯಿಂದ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿಸಂಪೂರ್ಣ ತನಿಖೆ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಅದರಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಸಿ.ಎಮ್‌.ಪುಷ್ಪಲತಾ ಅವರು ವಿಚಾರಣೆ ನಡೆಸಿ ಪ್ರಕರಣದಲ್ಲಿ ಬಸವರಾಜ ಶಿಂದೋಳಕರ ಆರೋಪಿ ಎಂಬುದು ಸಾಬೀತಾಗಿದ್ದರಿಂದ ಆತನಿಗೆ 30ವರ್ಷ ಜೈಲು ಶಿಕ್ಷೆ ಮತ್ತು 10,000ರೂ. ದಂಡ ವಿಧಿಸುವುದಲ್ಲದೆ, ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4,00,000 ರೂ. ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ. 

ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ಎಲ್‌.ವ್ಹಿ.ಪಾಟೀಲ ವಾದ ಮಂಡಿಸಿದರು. 

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಪಿ.ಐ ರಾಘವೇಂದ್ರ ಹಳ್ಳೂರ, ಪಿಎಸ್‌ಐ ಅವಿನಾಶ ಯರಗೊಪ್ಪ, ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಕಾಕತಿ ಪೊಲೀಸ್ ಠಾಣೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಮತ್ತು ಎಸಿಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.