ರಂಗಸಂಪದ ಚೈತ್ರ ನಾಟಕೋತ್ಸವ ಸಮಾರೋಪ: ಜನರನ್ನು ರಂಜಿಸಿದ ಡುಂಡಿರಾಜ್ ಸಂವಾದ

ರಂಗಸಂಪದ ಚೈತ್ರ ನಾಟಕೋತ್ಸವ ಸಮಾರೋಪ: ಜನರನ್ನು ರಂಜಿಸಿದ ಡುಂಡಿರಾಜ್ ಸಂವಾದ Rangasampada Chaitra Drama Festival concludes: Dundiraj's dialogue entertains the crowd

ಬೆಳಗಾವಿ 1: ಬೆಳಗಾವಿಯ ರಂಗಸಂಪದ ತಂಡದ ಮೂರು ದಿನದ ಚೈತ್ರ ನಾಟಕೋತ್ಸವದ ಮೂರನೇ ಕೊನೆಯ ದಿನವಾದ ದಿ 29 ರವಿವಾರದಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹನಿಗವಿ ಡುಂಡಿರಾಜ್ ರಚನೆಯ ಪುಕ್ಕಟೆ ಸಲಹೆ ನಗೆ ನಾಟಕ, ಡುಂಡಿರಾಜರೊಂದಿಗೆ ಸಂವಾದ ಅಲ್ಲದೇ ಡುಂಡಿರಾಜ ಅವರ ‘ಪುಕ್ಕಟೆ ಸಲಹೆ’ ಮತ್ತು ‘ಕಾಯುವ ಕಾಯಕ’ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಜರುಗಿತು. 

 ಕೃತಿಕಾರ ಎಚ್ ಡುಂಡಿರಾಜ ಅವರು ಮಾತನಾಡಿ, ಪುಕ್ಕಟೆ ಸಲಹೆ ಹಾಸ್ಯನಾಟಕ ಬೆಂಗಳೂರಿನಲ್ಲಿ 130 ಪ್ರದರ್ಶನವನ್ನು ಕಂಡಿದೆ. ಅಲ್ಲಿಯ ನಾಟಕಗಳನ್ನು ನೋಡಿದ್ದೇನೆ. ಪ್ರತಿ ಪ್ರಯೋಗವೂ ಒಂದೊಂದು ವಿಶೇಷ ಅನುಭವ ನೀಡಿವೆ. ನಿರ್ದೇಶಕ ಡಾ. ಅರವಿಂದ ಕುಲಕರ್ಣಿಯವರು ಚಲನಚಿತ್ರ ಹಾಡು, ನೃತ್ಯಗಳನ್ನು ಸ್ವಂತಿಕೆಯನ್ನು ಉಪಯೋಗಿಸಿಕೊಂಡು ರಂಜಿಸಿದ್ದಾರೆ. ಆ ಸ್ವಾತಂತ್ರ್ಯ ನಿರ್ದೇಶಕನಿಗಿರುತ್ತದೆ. ಈ ಪ್ರದರ್ಶನ ವಿಶಿಷ್ಟ ಭಿನ್ನವಾಗಿದ್ದು. ವಿಶೇಷ ಅನುಭವ ಕೊಟ್ಟಿದೆ ಎಂದು ಹೇಳಿ ನಿರ್ದೇಶಕ ಡಾ. ಅರವಿಂದ ಕುಲಕರ್ಣಿ ಹಾಗೂ ಕಲಾವಿದ ತಂಡವನ್ನು ಅಭಿನಂದಿಸಿದರು.  

ರಂಗಕರ್ಮಿ ಶ್ರೀಪತಿ ಮಂಜನಬೈಲು ಸಂವಾದ ನಡೆಸಿಕೊಟ್ಟರು. ಶ್ರೀಪತಿಯವರು ಕೇಳಿದ ಹೆಚ್ಚಿನ ಪ್ರಶ್ನೆಗೆ ಡುಂಡಿರಾಜ್ ಅವರು ಹನಿಗವನಗಳಲ್ಲಿಯೇ ಉತ್ತರಿಸಿದ್ದು ವಿಶೇಷವಾಗಿತ್ತು. ನಾನೊಂದು ಶಿರ್ಷೀಕೆ ಹೇಳ್ತೀನಿ ಅದಕ್ಕೊಂದು ನೀವು ಹನಿಗವನ ಹೇಳಬೇಕೆಂದು ಮಂಜನಬೈಲು ಹೇಳಿದರು. ಅದಕ್ಕೆ ಡುಂಡಿರಾಜ್ ನೆನಪಿದ್ರೆ ಹೇಳ್ತೀನಿ, ನೆನಪಿದ್ರೆ ಹೇಳ್ತೀನಿ, ಇಲ್ಲದಿದ್ದರೆ ಆಗೊಲ್ಲ, ಕೇಳಿದ್ದನ್ನೆಲ್ಲ ಹೇಳೋಕೆ, ನಾನೇನು ಗೂಗಲ್ಲ! ಹನಿಗವನದಲ್ಲಿಯೇ ಉತ್ತರಿಸಿದ್ರು. ಅರ್ಧಗಂಟೆ ನಡೆದ ಈ ಸಂವಾದ ಜನರನ್ನ ನಗೆಗಡಲಲ್ಲಿ ತೇಲಿಸಿತು. ರಂಜಿಸುವಲ್ಲಿ ಯಶಸ್ವಿಯಾಯಿತು. ಪುಕ್ಕಟೆ ಸಲಹೆ ನಾಟಕ ಪ್ರದರ್ಶನಗೊಂಡಿತು.

ನಿರ್ದೇಶನ ಡಾ. ಅರವಿಂದ ಕುಲಕರ್ಣಿಯವರದಾಗಿತ್ತು. ಕಲಾವಿದರಾದ ಶ್ರೀಮತಿ ಪದ್ಮಾ ಕುಲಕರ್ಣಿ, ಎ.ಎಂ. ಕುಲಕರ್ಣಿ, ಪ್ರಸಾದ ಕಾರಜೋಳ, ಮಂಜುನಾಥ ಕಲಾಲ, ವಿನುತಾ ಗೆಜ್ಜಿ, ಉಜ್ವಲಾ ಪವಾರ, ಆರ್‌. ವಿ. ಭಟ್, ಶರಣಪ್ಪ ಮಠಪತಿ, ಎಸ್‌. ವಿ. ದೀಕ್ಷಿತ, ಭಾಗ್ಯಶ್ರೀ, ಗೀತಾ ಮಡಿವಾಳ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡರು. ನೆಳಲು ಬೆಳಕು ಗುರುದತ್ತ ಪೇಟ್ನೇಕರ ಮತ್ತು ರಾಜು ಪವಾರ, ಸಂಗಿತ ಪೂರ್ವೀ ರಾಜಪುರೋಹಿತ ಮತ್ತು ರುಚಿತಾ, ರಘುನಾಥ ಕುಲಕರ್ಣಿ, ವಸ್ತ್ರ ವಿನ್ಯಾಸ ಪಟೇಲದವರದಾಗಿತ್ತು. ಹಿರಿಯ ಪತ್ರಕರ್ತ ಎಲ್‌. ಎಸ್‌.ಶಾಸ್ತ್ರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತೀಯ ಜೀವವಿಮಾ ನಿಗಮ ಬೆಳಗಾವಿ ಘಟಕ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.