ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಬಗ್ಗೆ ಚಿಂತನೆ: ರಮೇಶ್ ಜಾರಕಿಹೊಳಿ

ಬೆಂಗಳೂರು, ಏ.16,ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನದ  ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ  ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್  ಜಾರಕಿಹೊಳಿ‌ ತಿಳಿಸಿದ್ದಾರೆ.ರಾಜ್ಯ ಸರ್ಕಾರದ ನಿವೃತ್ತ  ಕಾರ್ಯದರ್ಶಿ ಕ್ಯಾ. ರಾಜಾರಾವ್ ಅವರೊಂದಿಗೆ ರಾಜ್ಯದ ನೀರಾವರಿ ಯೋಜನೆಗಳ  ಕುರಿತು ಚರ್ಚಿಸಿದ ನಂತರ‌ ಮಾತನಾಡಿದ ಸಚಿವರು,  ಕುಡಿಯುವ ನೀರು, ಅಂತರ್ಜಲ ಮತ್ತು  ಔದ್ಯೋಗಿಕ ಕ್ಷೇತ್ರದಲ್ಲಿ ನೀರಿನ ಬಳಕೆ ಕುರಿತಂತೆ ದೂರದೃಷ್ಟಿಯ ನೀಲನಕ್ಷೆ ಸಿದ್ಧಪಡಿಸಲಾಗುವುದು. ಮುಂದಿನ‌ ಮಳೆಗಾಲದಲ್ಲಿ ಅತಿವೃಷ್ಟಿ ತಡೆಗೆ ವ್ಯಾಪಕ‌ ಕ್ರಮ  ಕೈಗೊಳ್ಳಲಾಗಿದೆ. ನಮ್ಮ ನೀರನ್ನು‌ ಉಳಿಸಿಕೊಂಡು ಯೋಜನೆಗಳನ್ನು‌ ಪ್ರಾರಂಭಿಸುತ್ತೇವೆ  ಎಂದರು.
ನೀರಿನ‌ ಸದ್ಬಳಕೆಗೆ ಅಂತರ ರಾಜ್ಯ ನದಿ ಜೋಡಣೆ ಮಾಡಬೇಕಾದ ಅಗತ್ಯವಿದೆ. ಇದರಿಂದ  ರಾಜ್ಯದ ನೀರಿನ‌ ಪಾಲು ಕೂಡಾ ಹೆಚ್ಚಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ಜಲಶಕ್ತಿ  ಸಚಿವರನ್ನು ಭೇಟಿ ಮಾಡಿ ಈ‌ ಕುರಿತು ಚರ್ಚಿಸಲಾಗುವುದು ಎಂದು‌ ಸಚಿವರು  ತಿಳಿಸಿದರು. ಹನಿ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು  ವಿಸ್ತೃತ ನೀತಿ ರೂಪಿಸುತ್ತೇವೆ. ದೊಡ್ಡ ಮಟ್ಟದ ಏತ ನೀರಾವರಿ ಯೋಜನೆಗಳಿಗೆ  ಸಂಬಂಧಿಸಿದಂತೆ ಸರ್ಕಾರ, ನೀತಿಯನ್ನು ರೂಪಿಸಬೇಕಾಗಿದ್ದು ಈ ಕುರಿತಂತೆ ಇಲಾಖೆಯ  ಮಟ್ಟದಲ್ಲಿ ಚರ್ಚೆ ಮಾಡಿ ಶೀಘ್ರವಾಗಿ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು  ಸಚಿವರು  ತಿಳಿಸಿದರು.ಕೃಷ್ಣ ನದಿ ನೀರಿನ ಸದ್ಬಳಕೆ ಗಾಗಿ ಕೂಡಲೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ‌ ಮಾಡಲಾಗಿದೆ. ಈ‌  ಕುರಿತಂತೆ ನವದೆಹಲಿಗೆ ತೆರಳಿ ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಈ‌ ಕುರಿತು ಮಾತನಾಡಿ  ಕೂಡಲೇ ಅಧಿಸೂಚನೆ ಹೊರಡಿಸಲು‌ ಮನವಿ‌ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವರು  ತಿಳಿಸಿದರು.