ಬೆಂಗಳೂರು, ಏ.25, ಪಾದರಾಯನಪುರ ಘಟನೆಯ ಆರೋಪಿಗಳನ್ನು ಇರಿಸಿದ್ದ ರಾಮನಗರ ಜಿಲ್ಲಾ ಕಾರಾಗೃಹವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಕೋವಿಡ್ 19 ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ರಾಮನಗರ ಸಿಎಂಸಿ ಆಯುಕ್ತರಾದ ಶುಭಾ ಅವರನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಘಟನಾ ಕಮಾಂಡರ್ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಮುಂಜಾಗೃತಾ ಕ್ರಮವಾಗಿ ರಾಮನಗರ ನಗರ ಸಭೆಯ ಏಳು ಮಂದಿ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ವಾಹನದಲ್ಲಿ ಕರೆತಂದ ಹಲವು ಪೊಲೀಸರನ್ನು ಕೂಡ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.ಪಾದರಾಯನಪುರ ಘಟನೆಯ ಆರೋಪಿಗಳ ಪೈಕಿ ಐದು ಮಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದರು. ಕೊನೆಗೆ ಸರ್ಕಾರ ಆರೋಪಿಗಳನ್ನು ಕಾರಾಗೃಹದಿಂದ ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಿತ್ತು.