ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ರಾಜು ಕಾಗೆ

ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ರಾಜು ಕಾಗೆ Raju Kage expresses intention to resign

ಕಾಗವಾಡ, 23 : ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆ ಮತ್ತು ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಶಾಸಕ ರಾಜು ಕಾಗೆ ಅಸಮಾಧಾನ ಹೊರಹಾಕಿದ್ದು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಆಶ್ಚರ್ಯ ಪಡಬೇಕಾಗಿಲ್ಲವೆಂದು ಕಾಗವಾಡ ಶಾಸಕ ರಾಜು ಕಾಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಅವರು, ಸೋಮವಾರ ದಿ. 23 ರಂದು ಮತಕ್ಷೇತ್ರದ ಐನಾಪೂರ ಪಟ್ಟಣದ ಪ್ರಗತಿ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಮಂಗಸೂಳಿ ಗ್ರಾಮದಲ್ಲಿ 1.5 ಲಕ್ಷ ರೂ. ವೆಚ್ಚದ ಅರಗ ರಸ್ತೆ ಸುಧಾರಣೆ, ಅಲ್ಪಸಂಖ್ಯಾತ ಇಲಾಖೆಯಿಂದ 10 ಲಕ್ಷ ರೂ. ಅನುದಾನದ ದರ್ಗಾ ಅಭಿವೃದ್ಧಿ, 55 ಲಕ್ಷ ರೂ. ವೆಚ್ಚದ ಜಲಜೀವನ ಮಷಿನ್ ಯೋಜನೆಯ ಮೇಲ್ಮಟ್ಟದ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಕಾಮಗಾರಿ ಮತ್ತು ನೂತನವಾಗಿ ನಿರ್ಮಾಣವಾದ ಸರ್ಕಾರಿ ಪ್ರಾಥಮಿಕ ಶಾಲೆ ಎರಡು ಕೊಠಡಿ, ಪ್ರೌಢ ಶಾಲೆಯ ನಾಲ್ಕು ಕೊಠಡಿಗಳನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಐನಾಪೂರ ಪಟ್ಟಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಾನೇ ಚಾಲನೆ ನೀಡಿರುವ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ಕಾಮಗಾರಿ ಆದೇಶವನ್ನು ಬಿಡುಗಡೆಗೊಳಿಸುತ್ತಿಲ್ಲ. ಜೊತೆಗೆ ಗುತ್ತಿಗೆದಾರರು ಸಹ ಸೂಕ್ತ ಸಮಯದಲ್ಲಿ ಕಾಮಗಾರಿ ಪ್ರಾರಂಭಿಸದೇ ಮಳೆಗಾಲ ಪ್ರಾರಂಭವಾಗುವ ವೇಳೆಗೆ ಕಾಮಗಾರಿ ಪ್ರಾರಂಭಿಸುತ್ತಾರೆ. ಇದರಿಂದ ಗುಣಮಟ್ಟದ ಕಾಮಗಾರಿಗಳು ಆಗುವುದಿಲ್ಲ. ಸರ್ಕಾರದ ಧೋರಣೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಬೇಸರ ಮೂಡಿಸಿದೆ.  

ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ್ ಅವರು ಇದೇ ರೀತಿ ಸ್ವ-ಪಕ್ಷದ ಸರ್ಕಾರದ ವಿರುದ್ಧವೇ ಹಾಗೂ ಸರ್ಕಾರದಲ್ಲಿಯ ಲಂಚಾವತಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅವರ ಹೇಳಿಕೆಯ್ನು ನಾನು ಬೆಂಬಲಿಸುತ್ತೇನೆ. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಯಾವುದೇ ಕಾಮಗಾರಿಗಳು ಆಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಸಿ.ಎಂ. ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಆಶ್ಚರ್ಯ ಪಡೆಬೇಕಾಗಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. 

ಈ ವೇಳೆ ಅಧಿಕಾರಿಗಳಾದ ಜಯಾನಂದ ಹಿರೇಮಠ, ವೀರಣ್ಣ ವಾಲಿ, ಎಂ.ಆರ್‌. ಮುಂಜೆ, ಮಲ್ಲಿಕಾರ್ಜುನ ಮಗದುಮ್ಮ, ರವಿಂದ್ರ ಮುರಗಾಲಿ, ಮುಖಂಡರಾದ ಅರುಣ ಗಾಣಿಗೇರ, ಪ್ರವೀಣ ಗಾಣಿಗೇರ, ಸುರೇಶ ಅಡಿಶೇರಿ, ರವಿಂದ್ರ ಪೂಜಾರಿ, ಬಾಳು ಬಜಂತ್ರಿ, ಮುಖುಂದ ಪೂಜಾರಿ, ಗುತ್ತಿಗೆದಾರರಾದ ಬಸವರಾಜ ಮಗದುಮ್ಮ, ತಿಪ್ಪಣ್ಣ ಬಜಂತ್ರಿ, ರಮೇಶ ಪಾಟೀಲ, ಅನೀಲ ಸತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.