ಕವಿಯ ಕಣ್ಣಲ್ಲಿ ಮಳೆಗಾಲ ಮತ್ತು ನಿಸರ್ಗ

ಕವಿ ಕಣ್ಣಿನಲ್ಲಿ ನಿಸರ್ಗ ಮತ್ತು ಮಳೆಗಾಲ  

ವಿಶ್ವವೊಂದು ಮಹಾಲೀಲೆ  

ಆಡುವವನದಾರ್  

ಮುಗಿಲ ತುಂಬ ಚಿಕ್ಕೆ ಹರವಿ  

ತಿಗರಿಯಂತೆ ಜಗವ ತಿರುವಿ  

ಹಗಲ ಹಿಂದೆ ಮುಗಿಲ  ಮೇಲೆ   

ಅಡಗಿದವನದಾರ್?"  

ಶಂಕರ ಮೊಕಾಶಿಯವರ ಒಂದು ಕವನದ ಸಾಲುಗಳಿವು. ವೈಶಾಖದ ಬಿರು ಬಿಸಿಲಲ್ಲಿ ಕಾದ ಪ್ರಕೃತಿಗೆ ಮುಂಬರುವ ಮಳೆಗಾಲದ ಚಿಂತೆ. ಆದರೆ ಕವಿಗೆ ನಿಸರ್ಗದ ಮೋಹ. ಬಗೆಬಗೆಯಲ್ಲಿ ಬಣ್ಣಿಸುವ ದಾಹ. ಈ ದಾಹವಿಲ್ಲದವನು ಕವಿಯೇ ಅಲ್ಲ. ಯಾವತ್ತೂ ಕವಿಗೆ ಈ ನಿಸರ್ಗವೊಂದು ಮಹಾ ವಿಸ್ಮಯ. ಅದನ್ನೇ ಮೊಕಾಶಿಯವರು ಹೇಳಿದ್ದು.   

ಜನಸಾಮಾನ್ಯರು ನಿಸರ್ಗವನ್ನು ಕಾಣುವದಕ್ಕೂ ಕವಿ ಕಾಣುವದಕ್ಕೂ ವ್ಯತ್ಯಾಸವಿದೆ. ರವಿ ಕಾಣದ್ದನ್ನು ಕವಿ ಕಾಣುವದೆಂದರೆ ಅದೇ. ನಿಸರ್ಗದ ಚೆಲುವನ್ನು ಕಾಣುತ್ತಿದ್ದಂತೆಯೇ ಕವಿಯ ಕಣ್ಣು ಅರಳುತ್ತದೆ. ಕಲ್ಪನೆ ಗರಿಗೆದರುತ್ತದೆ. ಭಾವದಲೆಗಳು ತರಂಗ ತರಂಗವಾಗಿ  ಮನಸ್ಸಿಗೆ ಅಪ್ಪಳಿಸತೊಡಗುತ್ತವೆ.   

ಕರಾವಳಿಯ ಕವಿಗಳಿಗೆ ಪಡುಗಡಲೇ ಒಂದು ಮಹಾಕಾವ್ಯ. ಪಂಜೆ ಮಂಗೇಶರಾಯರು "ತೆಂಕಣ ಗಾಳಿಯೊಡನೆ" ಆಟವಾಡಿದರೆ, ಕಡೆಂಗೊಡ್ಲು ಶಂಕರ ಭಟ್ಟರು ಪಡುವಣ ಸಂಜೆಯ ಸೊಬಗಿಗೆ ಮೈಮರೆಯುತ್ತಾರೆ. ಪಂಜೆಯವರು ತೆಂಕಣ ಗಾಳಿಯಾಟದ ಮೂಲಕ ಪ್ರಾದೇಶಿಕ ವೈಶಿಷ್ಟ್ಯಗಳನ್ನು ತೆರೆದಿಡುವ ಬಗೆ ಅದ್ಭುತ!  ಕನ್ನಡದಲ್ಲಿ ಅಂಥ ಕವನ ಇನ್ನೊಂದಿಲ್ಲ. ಅದರ ಓಟವೇ ಹಾಗಿದೆ.  ನಾವೂ ಅದರ ಬೆನ್ನು ಹತ್ತಿ ಓಡಬೇಕೆನಿಸುತ್ತದೆ.   

"ಬರಲಿದೆ ಅಹಹಾ, ದೂರದಿ ಬರಲಿದೆ  

ಭುಸುಗುಟ್ಟುವ  ಪಾತಾಳದ ಹಾವೋ,   

ಹಸಿವಿನ ಭೂತದ ಕೂಯುವ ಕೂವೋ,   

ಹೊಸತಿದು ಕಾಲನ ಕೋಣದ ಓ ಓ,   

ಉಸುರಿನ ಸುಯ್ಯೋ, ಸೂಸೂಕರಿಸುತೆ  

ಬರುವದು ಭರಭರ, ಭರದಲಿ ಬರುವದು,  

ಬರಲಿದೆ ಅಹಹಾ...  

*   

ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ  

ಉಬ್ಬರ ಎಬ್ಬಿಸಿಸಿ ಕಡಲಿನ ನೀರಿಗೆ  

ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ  

ಅಬ್ಬರದಲಿ ಬೋರ್ ಬೋರನೆ ಗಮ್ಮಿಸಿ...  

ಬರಲಿದೆ...  

*   

ಸಡಿಲಿಸಿ ಮಡದಿಯರುಡಿಯನು ಮುಡಿಯನು/ ಬಡ ಮುದುಕರ ಕೊಡೆ ಗರಿ ಹರಿದಾಡಿಸಿ/ ಹುಡುಗರ ತಲೆ ತಲೆ ಟೊಪ್ಪಿಯ ಆಟವ/ ಗಡಬಡನಾಡಿಸಿ ಮನೆಮನೆ ತೋಟದ/ ಅಡಿ ಮೇಲಾಗಿಸಿ ತೆಂಗನು ಲಾಗಿಸಿ/ ಅಡಕೆಯ ಬಾಗಿಸಿ, ಪನೆ ಇಬ್ಭಾಗಿಸಿ/ ಬುಡದೂಟಾಡಿಸಿ ತಲೆ ತಾಟಾಡಿಸಿ/ ಗುಡಿಸಲ ಮಾಡನು ಹುಲು ಹುಲು ಮಾಡಿಸಿ/ ಬರಲಿದೆ ಅಹಹಾ...  

*   

ಗಿಡಗಿಡದಿಂ ಚೆಲು ಗೊಂಚಲು  ಮಿಂಚಲು/ ಮಿಡಿಯನು ಹಣ್ಣನು ಉದುರಿಸಿ ಕೆದರಿಸಿ / ಎಡದಲಿ ಬಲದಲಿ  ಕೆಲದಲಿ ನೆಲದಲಿ /  ಪಡುವಣ ಮೋಡವ  ಬೆಟ್ಟಕೆ ಘಟ್ಟಕೆ / ಹೊಡೆದಟ್ಟುತ ಕೋಲ್ ಮಿಂಚನು ಮಿರುಗಿಸಿ/ ಗುಡುಗನು ಗುಡುಗಿಸಿ ನೆಲವನು ನಡುಗಿಸಿ / ಸಿಡಿಲನು ತಾಳೆಗೆ ಬಾಳೆಗೆ ಎರಗಿಸೆ/ ಜಡಿಮಳೆ ಸುರಿವೋಲ್, ಬಿರುಮಳೆ ಬರುವೊಲ್‌/ ಕುಡಿ ನೀರನು ಒಣಗಿಸಿ ನೆಲ ಕೆರೆವೋಲ್ / ಬಂತೈ ಬಂತೈ ಬೀಸುತ ಬಂತೈ ತೆಂಕಣ ಗಾಳಿಯು ಕೊಂಕಣ ಸೀಮೆಗೆ...  

*   

ಕಾವ್ಯ ಎಂದರೆ ಇದು. ಆ ಶಬ್ದಶಕ್ತಿ, ಆ ಕಲ್ಪನೆ, ಆ ರೂಪಕವೈಭವ ಎಲ್ಲವೂ ಅನನ್ಯ. ಕವಿಯ ಕಲ್ಪನಾ ವಿಲಾಸ ಭೃಂಗದ ಬೆನ್ನೇರಿ, ಹಾಡಿ ಕುಣಿದು ಕುಪ್ಪಳಿಸಿ ಶಬ್ದಗಳ ಭೋರ್ಗರೆತದೊಂದಿಗೆ ಹಾರಿ ಏರಿ ಬರುವ ಕಡಲ ಅಲೆಗಳ ನರ್ತನವನ್ನು, ಆ ತೆಂಕಣ ಗಾಳಿ ಮಾಡುವ ಅವಾಂತರಗಳನ್ನು, ಆ ಸುರಿಮಳೆಯ ಸೊಬಗನ್ನು  ಒಂದು ದೃಶ್ಯ ಕಾವ್ಯವಾಗಿ ನಮ್ಮೆದುರು ಇಡುತ್ತಾರೆ ಪಂಜೆಯವರು. ಇದೊಂದು ಮಹಾಕಾವ್ಯಕ್ಕೆ ಸಮ. (ಈ ಕವನವನ್ನು ಕವಿ ಬಿ. ಎಂ. ಇದಿನಬ್ಬ ಅವರು ನಮ್ಮ ಕಣ್ಣಿಗೆ ಕಟ್ಟುವಂತೆ ಹಾಡಿದ್ದು ನನಗೆ ಇಲ್ಲಿ ನೆನಪಾಗುತ್ತದೆ.) ಕಾವ್ಯಾನಂದರ ಕಾರ್ಗಾಲದ ವೈಭವ ಎಂಬ ಕವನವೂ ಇದೇ ಮಾದರಿಯದು.  

ನಿಸರ್ಗದ ರಮ್ಯತೆಯನ್ನು ಬಣ್ಣಿಸದ ಕವಿಗಳೇ ಇಲ್ಲ. ಆದರೆ ಕವಿ ಕಲ್ಪನೆ ಭಿನ್ನ ಭಿನ್ನ., ಒಂದಕ್ಕಿಂತ ಒಂದು ಚೆನ್ನ! ಬಹುಶಃ ಪ್ರೇಮವನ್ನು ಬಿಟ್ಟು ಕವಿಹೃದಯವನ್ನು ನಿಸರ್ಗ ಕಾಡಿದಂತೆ ಬೇರೆ ಯಾವದೂ ಕಾಡಿರಲಿಕ್ಕಿಲ್ಲ. ಸೂರ್ಯ ಚಂದ್ರರ ಉದಯಾಸ್ತ, ತಿಳಿ ನೀಲಿ ಬಾನು, ಗಿಡಮರ, ಬೆಟ್ಟ ಗುಡ್ಡ, ಕಾಡು ಕಣಿವೆ, ಬೆಳದಿಂಗಳು, ಹರಿವ ಹೊಳೆ, ಹಾರುವ ಝರಿ, ಕಡಲ ತೆರೆ, ಬೆಳ್ಳಕ್ಕಿ, ಕೋಗಿಲೆಯ ಕೂಗು, ಕಾಮನಬಿಲ್ಲು, ವಸಂತ ಮಾಸ, ಶ್ರಾವಣ, ಶರದ್ ಋತು, ಎಲ್ಲವೂ ಕವಿಕಾವ್ಯದ ವಸ್ತುವಿಷಯಗಳೇ. ಎಲ್ಲವೂ ಕವಿಗೆ ನಿತ್ಯ ನವನವೀನ. ಬರೆದಷ್ಟು ತೃಪ್ತಿಯಿಲ್ಲ. ಅಂತಹ ಕೆಲವು ಸುಂದರ ಕವನದ ಸಾಲುಗಳನ್ನು ಗಮನಿಸೋಣ.   

ಶ್ರೀ ಚೆನ್ನವೀರ ಕಣವಿಯವರು ತಮ್ಮ "ವಿಶ್ವ ಕವಿಯ ದೃಶ್ಯ ಕಾವ್ಯ"ದಲ್ಲಿ "ಮಹಾಕಾವ್ಯವೀ ಭವ್ಯ ಸೃಷ್ಟಿ, ಇದನೋದಿದನಿತು ರಮ್ಯ" ಎನ್ನುತ್ತಾರೆ. ಈ ಜಗತ್ತೇ ಕವಿಗೆ ಒಂದು ರಮ್ಯ ಮಹಾಕಾವ್ಯದಂತೆನಿಸುತ್ತದೆ.   

ಕಣವಿಯವರು ವಸಂತವನ್ನು ಸ್ವಾಗತಿಸುತ್ತ-  

"ಗಿಡದ ರೆಂಬೆಕೊಂಬೆಗಳಲಿ ಚಿಗುರು ಕಣ್ಣ  

ತೆರೆದಿದೆ,   

ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ,  

ಬಾ ವಸಂತ, ನಿನಗನಂತ ಆಲಿಂಗನ ಸಂದಿದೆ   

ಸೃಷ್ಟಿ ನೋಂತು ನಿಂದಿದೆ" ಎನ್ನುತ್ತಲೇ   

ತಮ್ಮ "ಪಥಿಕ" ಕವನದಲ್ಲಿ   

"ಮಳೆಯ ರೂಪದಿ ಮುಗಿಲು ಮುತ್ತಿಡಲು  

ಮತ್ತೇರಿ   

ಹೊತ್ತು ನಿಂತಿಹಳಮಿತ  ವೃಕ್ಷರಾಶಿ"   

ಎಂದು ಬಣ್ಣಿಸುತ್ತಾರೆ.   

ಒಂದು ಮುಂಜಾವನ್ನು ಕಣವಿ ಕಂಡ ಬಗೆ-   

"ಹೂ ಮುಡಿದು ಮದುಮಗಳ ಹೋಲುತಿತ್ತು  

ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ  

ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು"  

ಮುಸ್ಸಂಜೆಯೂ ಅವರಿಗೆ ಅಷ್ಟೇ ಸೊಗಸು-  

"ಕವಿಯದೊ ಬಿದ್ದನು, ಕವಿಯದೊ ಎದ್ದನು, ತಂಗಾಳಿಯ ಜೊತೆ ಕೇಳಿಯಲಿ, ನೀಲಾಂಗಣದಲಿ ಮೋಡದ ಪುತ್ಥಳಿ  ತೂಕಡಿಸುತ್ತಿರೆ ನಿದ್ದೆಯಲಿ"    

ಎಂದು ಹೇಳಿ ಮುಚ್ಚಂಜೆಯ ತೆರೆಯಾಚೆ ಕನಸಿನ ಲೋಕವೊಂದು ನಾಕವನ್ನೇ ತೆರೆದು , ತುಂಬಿದ ಚಂದಿರ ಸ್ವಪ್ನದಿ ಸುಂದರ ಮಾಯಾ ಮಂದಿರ ರಚಿಸುವದನ್ನು ತೋರಿಸುತ್ತಾರೆ.   

*   

ಅಡಿಗರು ಕಂಡ " ಒಂದು ಸಂಜೆ" ಹೇಗಿದೆ ನೋಡಿ-   

ಮೌನ ತಬ್ಬಿತು ನೆಲವ, ಜುಮ್ಮೆನೆ  

ಪುಳಕಗೊಂಡಿತು ಧಾರಿಣಿ  

ನೋಡಿ ನಾಚಿತು ಬಾನು ಸೇರಿತು  

ಕೆಂಪು ಸಂಜೆಯ ಕದಪಲಿ  

ಬೆಚ್ಚ ಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ  

ತೆವಳಿತು"   

*   

ಮೈಸೂರು ಮಲ್ಲಿಗೆಯ ಕವಿ ಕೆ. ಎಸ್‌. ನ. ಅವರಿಗೆ ಬೆಳಗಿನ ತೋಟದಲ್ಲಿ ವಿಹರಿಸುವಾಗ  ಅನಿಸುವುದು ಹೀಗೆ-   

"ಬಳ್ಳಿಯ ಬೆರಳಲಿ ಹೂವೊಂದಿತ್ತು, ಉಂಗುರವಿಟ್ಟಂತೆ/ ಹೂವಿನ ತುಟಿಯಲಿ ಹನಿಯೊಂದಿತ್ತು ಮುತ್ತೊಂದಿಟ್ಟಂತೆ/ ನೀರಿನ ಹನಿಯೇ ಕಾಮನ ಬಿಲ್ಲಿನ  ಕಂಬನಿಯಾಗಿತ್ತು"    

ಹೂವು ಬಳ್ಳಿಯ ಬೆರಳಿನ ಉಂಗುರದಂತೆ ಕಾಣುವ ಪರಿ ಅಪೂರ್ವ!  

*  

ಪಿ. ಲಂಕೇಶ ಅವರು ಕಾಣುವ ಬೆಳಗು ಹೀಗಿದೆ-   

"ರಾತ್ರಿಯೆಲ್ಲಾ ಭೂಮಿ ಆಗಸಕೆ ಮೊಗವಿಟ್ಟು  

ನಕ್ಷತ್ರಗಳ ಮೊಲೆಯ ಹೀರಿದಂತೆ  

ಅಮೃತ ಧಾರೆಯೆ ಬುವಿಗೆ ಸೋರಿದಂತೆ   

ಇದೊ ಬೆಳಗು ಪುಲಕಿಸಿತು  

ಮೈ ತಣ್ಣಗಾದ ಮಗು ಬದುಕಿದಂತೆ"   

* ಚಂದ್ರಶೇಖರ ಕಂಬಾರ ಅವರು " ಶ್ರಾವಣದ ಒಂದು ದಿನ" ಎಂಬ ಕವನದಲ್ಲಿ -   

"ಮುಗಿಲ ಮುತ್ತುಗಳನ್ನು ಕರಿಮೋಡ ಚಾಣಿಸಿತು/ ನೆಲದ ಚಿಪ್ಪೆಗಳು ಬಿತ್ತು ಅಲ್ಲಿ ಇಲ್ಲಿ/ ಕರೆಯೆದ್ದು ಹಸಿರ ಕಣ್ಣರಳಿಸಿತು ಬಯಲಿನಲಿ/ ಬೀಳು ಆ ಈ  ಕಂಟಿ ಟೊಂಗೆಗಳಲಿ"  

* ತೊಯ್ದ ಗದ್ದೆಯ ತಲೆಯ ಬಾಚಿ ಹೆಣೆಯಿತೊ ಗಾಳಿ/ ಕುಣಿದಾಡಿತೋ ಬಿದಿರ ಮೈಯ ತುಂಬಿ/ ಹರೆ ಬಂತು ಝರಿತೊರೆಗು, ಹರಿಗೂ ಚರಂಡಿಗೂ / ಬಿಳಿಮೋಡ ನಕ್ಕವೋ ಬುರುಗು ತುಂಬಿ"  

- ಎಂದು ಶ್ರಾವಣದ ಮಳೆಯ ಸೊಬಗು ಬಣ್ಣಿಸುತ್ತಾರೆ.  

*  

ಕಡೆಂಗೋಡ್ಲು ಶಂಕರಭಟ್ಟರು ಹಕ್ಕಿಸಾಲನ್ನು  ಕಂಡು-   

"ಮರಗಳು ನಿಂತಿವೆ ತುದಿಯುಂಗುಟದಲಿ/ ಪಡುಗಡಲಿನ ಕಡೆ ಮೊಗವೆತ್ತಿ" ಎನ್ನುತ್ತಲೇ   

"ಆಗಸಕೇರಿಯ ಕಿರುದೋಣಿಗಳೆನೆ ಹಕ್ಕಿ ಸಾಲದೋ ತೇಲುತಿದೆ" ಎಂದು ಬಣ್ಣಿಸುತ್ತಾರೆ.   

*   

ಕಾಮನಬಿಲ್ಲನ್ನು ಕಂಡ ಕವಿ ವೀಸೀ ಅವರು-   

"ಇಳಿವ ತರಣಿ ಕಿರಣಗಳನು,/ ನಲಿಸಿ ನಗಿಸಿ ಹೊಕ್ಕು ಬಳಸಿ/ ಹಳದಿ ಬಿಳುಪು ಚೆಂಗುಲಾಬಿ/ ಹೊಳಪು ಹಸಿರು ಕೆಂಪು ನೀಲಿ/ ಎಳೆಯ ಪೀತ ಕಳೆಗಳೊಡನೆ/ ನಭವನೆಳೆದು ಇದಿರಿನಲ್ಲಿ ಬಿಲ್ಲು ನಿಂತಿದೆ/ ಕೆರೆಗೆ ಸೇತು ಕಟ್ಟಿದಂತೆ, ನೆಲಕೆ ಸಗ್ಗ ಬಿಗಿಸುವಂತೆ.." ಎನ್ನುತ್ತಾರೆ.   

*   

ಕವಿ ಜಿನದತ್ತ ದೇಸಾಯಿ ಅವರಿಗೆ ಚೈತ್ರ ಕಚಗುಳಿಯಿಡುತ್ತದೆ.-   

"ಆ ಗಾಳಿ ಯಾಕೆ ಆಕಳಿಸತೈತಿ ಹೊಡೆದು ಮತ್ತ ಜೋಲಿ?/ ಈ ಮೊಗ್ಗದೇಕೆ ಅರಳುವುದು ಹೇಳಿ ತುಸು ಮುಟ್ಟಿತೇನೊ ಗಾಳಿ/ ಆ ಹೂವದೇಕೆ ನಗುತಿಹುದು ಕೇಳಿ / ಭೃಂಗ ಸಂಗದೊಳು ಮೈಯ ಮರೆತು ಹುಡಿಯಾಡಿ ಸುರತ ಕೇಳಿ.."  

ಪಂಜೆ ಮಂಗೇಶರಾಯರ  ಕವನದಂತೆಯೇ ತಮ್ಮ ಕವನದಲ್ಲಿ ಮಳೆಯ ಜೊತೆ ಪ್ರಾದೇಶಿಕ ವೈಶಿಷ್ಟ್ಯಗಳನ್ನೂ ಪೋಣಿಸಿದ ಕವನ "ಶಿವಮೊಗ್ಗೆಯಲ್ಲಿ ಮಳೆ". ಇದು ಎಲ್ಲರಿಗೂ ಆಪ್ತವೆನಿಸುವ ಕವಿತೆ. ಇದು ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಕವನ.   

"ಹತ್ತು ದಿನದಿಂದ ಊರಲ್ಲಿ ಕಣ್ಣಿಟ್ಟು  ರಾಚುತ್ತಿದೆ ಮಳೆ/ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರ ಮೊಳೆ/  

*  ಊರಿನ ಕೆನ್ನೆಗೆ ಪಟಪಟ ಬಾರಿಸಿ / ಬೈಯುತ ವಟವಟ../ ಕೂಗಿ ಬರಿಸುತ್ತಿದೆ ಎಲ್ಲರೆದೆಯಲಿ ದಿಗಿಲು/ ತಿಂಗಳ ಹಿಂದೆ ಮಾತಾಡಲೂ ಬಾರದೆ ಉಗ್ಗುತ್ತಿದ್ದ ಮುಗಿಲು  

*  

ಮಳೆ ಹೊಡೆತಕ್ಕೆ ಕಂಗಾಲು ಮುಚ್ಚಿದೆ ಮನೆ ಬಾಗಿಲು/ ಸಿಳ್ಳು ಹಾಕುತ್ತ ಓಣಿಗಳಲ್ಲಿ ಪುಂಡ ಗಾಳಿಯ ಇರಿಚಲು ಕಾವಲು/ ತೆರೆದಿದ್ದರೆ ಕಿಟಕಿ ಒಳಕ್ಕೆ ಕೊಂಚ ಹಣಕಿ/ ಪೋಲಿ ಕೂಗುವ ತೆವಲು ಪಡ್ಡೆ ಗಾಳಿಗೆ/ ಕನಸುತ್ತದೆ ಗೂಳಿ ಮನಸ್ಸು- ಕಾಮದ ಹೋಳಿಗೆ.  

*   

ಹೊಳೆ ಚರಂಡಿ ಒಂದಾಗಿ, ಗುಂಡಾಭಟ್ಟರ ಮಡಿ ಬಂದಾಗಿ,  / ಪೂಜೆಸ್ನಾನಕ್ಕೆ ರಜ, ಸಂಧ್ಯಾವಂದನೆ ವಜ, / ಸಾರಿನ ದೊನ್ನೆ, ಕೆಂಪನೆ ಸೊನ್ನೆ, ಪ್ರಿಯನ ಮೊದಲ ಮುತ್ತಿಗೆ ನಾಚಿದ ಕನ್ನೆಯ ಕೆನ್ನೆ.  

*  

ಸಂಜೆ ರಸ್ತೆಯ ತುಂಬ ಅರಳಿದ ಛತ್ರಿಗಳ ವಾಕಿಂಗು, / ಕೆಸರು ರಸ್ತೆಯಲಿ ಎಂಕ ಸೀನರಿಗೆ ಸ್ಕೇಟಿಂಗು/  ಚಿಕ್ಕೆ ಬೆಳಕಿಲ್ಲದ ಕಕ್ಕಾಬಿಕ್ಕಿ ರಾತ್ರಿ/ ಊಟದ ಹೊತ್ತಿಗೆ ಕರೆಂಟು ಹೋಗುವದು ಖಾತ್ರಿ....  

ಮಳೆಯನ್ನೇ ಒಂದು ದೃಶ್ಯ ರೂಪಕವಾಗಿಪರಿವರ್ತಿಸುವ ಕವಿಪ್ರತಿಭೆಗೆ ಸಾಕ್ಷಿ ಈ ಕವನ. ನವಿರಾದ ಹಾಸ್ಯವೂ ಇಲ್ಲಿ ಸೇರಿರುವುದರಿಂದ ಖುಷಿ ಪಡಬಹುದು.   

*   

ಈಗ ನನ್ನದೂ ಒಂದು ಅಂತಹದೇ ಕವನ  "ಕಾರವಾರದ ಮಳೆ"  ಡಾ. ಎಚ್‌. ಎಸ್‌. ವೆಂಕಟೇಶ ಮೂರ್ತಿ, ಜಯಂತ ಕಾಯ್ಕಿಣಿ ಮೊದಲಾದವರಿಂದ ಮೆಚ್ಚುಗೆ ಪಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇಲ್ಲಿ ಹೊಸ ಬಗೆಯ ರೂಪಕಗಳ ಬಳಕೆಯಾಗಿದೆ.   

ಕಾರವಾರದ ಮಳೆ  

ಚಂಡಿ ಹಿಡಿದ ಈ ತುಂಟ ಮಗು   

ರಪರಪನೆ ಬಾಗಿಲು ಬಡಿಯುತ್ತಿತ್ತು;   

ತೆಗೆಯಲಿಲ್ಲಿವರೆಂಬ ಸಿಟ್ಟಿನಲಿ   

ಅತ್ತು ಕಣ್ಣೀರ   

ಹನಿ   

ಹನಿಯೆ   

ಇಳಿಸುತ್ತಿತ್ತು *  

*   

ಮೊದಲ ರಾತ್ರಿಯ ಈ ಗಂಡು  

ರಭಸದಿಂದ ಬಂದಪ್ಪುತ್ತಿತ್ತು  

ಪ್ರಣಯದ ಪ್ರಥಮಾನುಭವದಲ್ಲಿ   

ಸಿಕ್ಕು ನಾಚಿದ ಹೆಣ್ಣು  

ಕರಗಿ....   

ಕರಗಿ ...  

 ಬೆರೆಯುತ್ತಿತ್ತು.  

*  

ಉದ್ಧಟತನದ ಈ ಪ್ರಾಣಿ  

ಭೋರೆಂದು ಆರ್ಭಟಿಸುತ್ತಿತ್ತು  

ಮತ್ತೊಮ್ಮೆ ತಲೆ ಕೆಟ್ಟವರ ಹಾಗೆ   

ಸೋ ಎಂದು ಗೋಳಿಡುತ್ತಿತ್ತು  

ಧಡಬಡ ಎಂದು ಸಿಕ್ಕಿದ್ದಕ್ಕೆಲ್ಲ ಅಪ್ಪಳಿಸುತ್ತಿತ್ತು,  

ಕೇಳುವವರಿಲ್ಲೆನಿಸಿದಾಗ   

ನಿರುಪಾಯವಾಗಿ   

ಸಣ್ಣ ದನಿ ತೆಗೆಯುತ್ತ   

ನಿಟ್ಟುಸಿರು ಬಿಡುತ್ತ....   

ಅಲ್ಲಿಂದ  

ಕಾಲ್ತೆಗೆಯುತ್ತಿತ್ತು.  

* ಕರಾವಳಿಯ ಮಳೆಯ ಅನುಭವ ಇರುವವರಿಗೆಲ್ಲ ಇದಕ್ಕೆ ವಿವರಣೆ ಬೇಕಿಲ್ಲ. ಇದನ್ನು ಬರೆದದ್ದು 1972ರಲ್ಲಿ.  

-  ಎಲ್‌. ಎಸ್‌. ಶಾಸ್ತ್ರಿ 

ಹಿರಿಯ ಸಾಹಿತಿಗಳು, ಪತ್ರಕರ್ತರು 

         ಬೆಳಗಾವಿ  


- * * * -