ಬೆಂಗಳೂರು, ಅ 3 ಮುಂಗಾರು ಅವಧಿ ಅಧಿಕೃತವಾಗಿ ಅಂತ್ಯವಾಗಿದ್ದರೂ ಮಳೆಯ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ; ಇಂದೂ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನರು ಸಂಜೆ ಕಚೇರಿಯಿಂದ ಬೇಗ ಮನೆ ಸೇರಿಕೊಳ್ಳುವುದು, ಪರ್ಯಾಯ ವ್ಯವಸ್ಥೆಮಾಡಿಕೊಳ್ಳುವುದು ಉತ್ತಮ. ಸಂಜೆ ಕಚೇರಿಯಿಂದ ಬೇಗ ಮನೆ ತಲುಪಬೇಕು ಇ್ಲಲವಾದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಬುಧವಾರ ನಗರದಲ್ಲಿ ಗುಡುಗು ಮಿಂಚು ಸಹಿತ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ನಿಂತರೂ ಬೈಕ್ ಸವಾರರು ತಮ್ಮ ತಮ್ಮ ಸ್ಥಳ ತಲುಪಲು ಹರಸಾಹಸ ಮಾಡಿದ್ದರು. ಅದೇ ರೀತಿ ಗುರುವಾರ ಕೂಡ ಮಳೆ ಆಗಲಿದೆ ಎಂದು ವರದಿ ಹೇಳಿದೆ ಇಂದು ಸಂಜೆ ವೇಳೆಗೆ ವರುಣನ ಆರ್ಭಟ ಮತ್ತೆ ಆರಂಭವಾಗಲಿದೆ. ಮಳೆಯ ಜೊತೆ ಗುಡುಗು-ಮಿಂಚು ಕೂಡ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಸಂಜೆ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ವೃತ್ತ, ಸಂಜಯ್ ನಗರ, ಹೆಬ್ಬಾಳ, ಶಾಂತಿನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿನಗರ ಸೇರಿ ಹಲವು ಸ್ಥಳಗಳಲ್ಲಿ ಮಳೆಯಿಂದ ಟ್ರಾಫಿಕ್ ಸಮಸ್ಯೆಯಾಗಿ ಜನರು ಮನೆ ತಲುಪಲು ಹೈರಾಣರಾಗಿದ್ದರು.