2 ಲಕ್ಷ ರಾಪಿಡ್ ಪರೀಕ್ಷೆ ಕಿಟ್ ಖರೀದಿ: ಅಶ್ವತ್ಥನಾರಾಯಣ

ಬೆಂಗಳೂರು,ಏ.17,ಕೋವಿಡ್ ಪತ್ತೆಗಾಗಿ ಹೆಚ್ಚುವರಿಯಾಗಿ ಎರಡು ಲಕ್ಷ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ಖರೀದಿಸಲು ಗುರುವಾರ ಇಲ್ಲಿ ನಡೆದ ಕೋವಿಡ್ ಕುರಿತ ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಗುರುವಾರ ನಡೆದ ಕಾರ್ಯಪಡೆ ಸಭೆಯಲ್ಲಿ ಇಂತಹದ್ದೊಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅಶ್ವತ್ಥ ನಾರಾಯಣ ಮಾತನಾಡಿ, ‘ಚೀನಾ ಸರ್ಕಾರ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೆ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ಸರಬರಾಜು ಮಾಡಲು ಒಪ್ಪಿಗೆ ಸೂಚಿಸಲಾಗಿದೆ.ರಾಪಿಡ್ ಕಿಟ್‌ಗಳು ಬಂದ ನಂತರ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
‘ಕೋವಿಡ್ ರೋಗ ಲಕ್ಷಣಗಳು ಇರುವ ವ್ಯಕ್ತಿಯ ಕಫಾ ಮಾದರಿಗಳನ್ನು ಸಂಗ್ರಹಿಸಲು ರಾಜ್ಯದಲ್ಲಿ ತಾಲೂಕಿಗೆ ಒಂದರಂತೆ ಒಟ್ಟು 250 ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗುವುದು ಎಂದರು. ‘ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ಹಾಗೂ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯ. ಇದನ್ನು ಸ್ಥಳೀಯ ಮಟ್ಟದಲ್ಲಿ ಮುಸ್ಲಿಂ ಧರ್ಮಗುರುಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಲಾಗಿದೆ ಎಂದರು.‘ವೈದ್ಯರ ರಕ್ಷಣಾ ಕವಚಗಳು (ಪಿಪಿಇ) ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅಗತ್ಯ ಇರುವ 25 ಸಾವಿರ ಆರ್‍ಟಿಪಿಸಿಆರ್ ಕಿಟ್‍ಗಳ ಖರೀದಿಗೂ ಒಪ್ಪಿಗೆ ನೀಡಲಾಯಿತು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.ಜಿಲ್ಲಾ ಆಸ್ಪತ್ರೆ ಗಳಲ್ಲಿ ಕನಿಷ್ಠ ೫೦ ರಿಂದ ೧೦೦ ಹಾಸಿಗೆಗಳಿಗೆ ಕೇಂದ್ರಿಕೃತ ಆಮ್ಲ ಜನಕ ಸರಬರಾಜು ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಯಿತು ಎಂದರು.ರಕ್ತ/ಕಫಾ ಮಾದರಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಡಾ.ಸುದರ್ಶನ ನೇತೃತ್ವದ ತಂಡ ಕೊಟ್ಟಿರುವ ವರದಿಯನ್ನು ಅಂಗೀಕರಿಸಲಾಯಿತು. ಕೋವಿಡ್ ರೋಗಿಗಳಿಗೆ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಕೆ.ಸಿ.ಜನರಲ್ ಸೇರಿದಂತೆ ಬೇರೆ ಮಾಮೂಲಿ ರೋಗಿಗಳು ಹೋಗುವ ಕಡೆಗೆ ಚಿಕಿತ್ಸೆ ನೀಡಬಾರದು.ಕೋವಿಡ್ ಸಲುವಾಗಿಯೆ ಪ್ರತ್ಯೇಕ ಸಹಾಯವಾಣಿ ತೆರೆಯಲಾಗುವುದು. ಕನಿಷ್ಟ ೩೦೦ ಜನರು, ೫೦ ಸಾವಿರ ಕರೆ ಸ್ವೀಕರಿಸಲಿದ್ದಾರೆ.ದೆಹಲಿಯ ತಬ್ಲೀಗಿ ಜಮಾತ್ ಮತ್ತು ನಂಜನಗೂಡಿನ ಜೂಬಿಲಿಯಂಟ್ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೇಸಿಂಗ್ ಪೂರ್ಣವಾಗಿದ್ದು, ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲಾಗಿದೆ ಎಂದರು.