ಕೇಂದ್ರದ ಕೈಗೊಂಬೆ ಚುನಾವಣಾ ಆಯೋಗ : ಕೆ.ಶ್ರೀನಿವಾಸರಾವ್

ಕೇಂದ್ರದ ಕೈಗೊಂಬೆ ಚುನಾವಣಾ ಆಯೋಗ : ಕೆ.ಶ್ರೀನಿವಾಸರಾವ್  Puppet Election Commission of the Centre: K. Srinivasa Rao

ಲೋಕದರ್ಶನ ವರದಿ

ಕಂಪ್ಲಿ 18:  ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು ಎಸ್‌ಐಆರ್ ಪರಿಷ್ಕರಣೆ ಮೂಲಕ ದೇಶದಲ್ಲಿ ಮತದಾರರ ಹಕ್ಕನ್ನು ಕಿತ್ತಿಕೊಳ್ಳಲು ಮುಂದಾಗಿದೆ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಗುಡುಗಿದರು. ಪಟ್ಟಣಕ್ಕೆ ಆಗಮಿಸಿದ ಎಸ್‌ಐಆರ್ ವಿರೋಧಿ ಜಾಗೃತಿ ಜಾಥಾವನ್ನು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಗುರುವಾರ ಸ್ವಾಗತಿಸಿ, ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪುರಸಭೆ ಮುಂಭಾಗದ ವೇದಿಕೆಯಲ್ಲಿ ಮಾತನಾಡಿ, ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಚುನಾವಣಾ ಆಯೋಗ ಹೊರಟಿದೆ.

ರಾಷ್ಟ್ರದಲ್ಲಿ ಎಸ್‌ಐಆರ್ ಹೆಸರಿನಲ್ಲಿ ಸಂವಿಧಾನಾತ್ಮಕ ಮತದಾನದ ಹಕ್ಕು ಕಿತ್ತುಕೊಳ್ಳುವ ಹುನ್ನಾರ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸಿರುವುದನ್ನು ದೇಶದ ನಾಗರಿಕರು ವಿರೋಧಿಸಬೇಕು. ಚುನಾವಣಾ ಆಯೋಗ ಸಂವಿಧಾನದ ತಳಹದಿಯಲ್ಲಿ ನೀಡಿರುವ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಎಸ್‌.ಐಆರ್ ಹೆಸರಿನಲ್ಲಿ ಸರ್ಕಾರ ನಡೆಸಿದೆ, ಇದಲ್ಲದೆ ಕೋರ್ಟ್‌ ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಿ ಜನರ ಸ್ವಾತಂತ್ರ್ಯ ಮೊಟಕುಗೊಳಿಸು ಪ್ರಯತ್ನ ಇದಾಗಿದೆ ಎಂದರು. ಮುಖಂಡ ಎನ್‌.ಹಬೀಬ್ ರೆಹಮಾನ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಈ ಕ್ರಮವನ್ನು ಮತದಾರರು ಒಗ್ಗಟ್ಟಿನಿಂದ ವಿರೋಧಿಸಿ ಜನರ ಹಕ್ಕು ರಕ್ಷಣೆಗೆ ಮುಂದಾಗಬೇಕಾಗಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ದೇಶವ್ಯಾಪಿ ಕೋಟ್ಯಂತರ ಜನರ ಮತದಾನ ಹಕ್ಕನ್ನು ಕಸಿಯಲು ಕೇಂದ್ರ ಸರ್ಕಾರ ಹೊರಟಿದ್ದು, ಇದರ ವಿರುದ್ಧ ದೊಡ್ಡ ಅಭಿಯಾನ ನಡೆಸಬೇಕಿದೆ. ಕೆಲ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಿ, ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರ ಹಾಕಲಾಗಿದ್ದು, ಇದರಲ್ಲಿ ಕೋಟಾಂತರ ಅರ್ಹ ಮತದಾರರಿದ್ದಾರೆ. ಇದೇ ಸಂಚಿನಿಂದಲೇ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಶೇಷ ಜಾಗೃತಿ ಮೂಡಿಸಲು ಮುಂದಾಗಿದೆ. ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಡಿಲಿಟ್ ಆಗದಂತೆ ತಡೆಯುವ ಬಗ್ಗೆ ಎಚ್ಚರವಹಿಸಲಾಗುತ್ತಿದೆ ಎಂದರು.