ರಸ್ತೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ರಸ್ತೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ  Public outcry over roadwork


ಜಮಖಂಡಿ 28: ನಗರದ ಗೀರೀಶನಗರದ ಸಜ್ಜೆ ಹನುಮಾನ್ ದೇವಸ್ಥಾನದ ಬಳಿ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸದೆ ರಸ್ತೆ ನಿರ್ಮಿಸುತ್ತಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ನಾಗರಿಕರು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆಯನ್ನು ಮಾರಿ​‍್ಡಸುವಂತೆ ಒತ್ತಾಯಿಸಿದ್ದಾರೆ.  

ದೇವಸ್ಥಾನವನ್ನು ಕೇಂದ್ರದಲ್ಲಿಟ್ಟುಕೊಂಡು ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ನಿರ್ಮಿಸಲಾಗುತ್ತಿರುವ ಟಿಸಿಲು ರಸ್ತೆಗಳು ಮುಖ್ಯ ರಸ್ತೆಯ ಮುಂಭಾಗ ಹಾಗೂ ಹಿಂಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿವೆ. ಇದರಿಂದ ರಾಮೇಶ್ವರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸಂಚರಿಸುವ ವಾಹನಗಳಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  

ದೇವಸ್ಥಾನದ ಹಿಂಭಾಗದಲ್ಲಿ ಈಗಾಗಲೇ ಇರುವ ರಸ್ತೆಯನ್ನು ರದ್ದುಪಡಿಸಿ, ದೇವಸ್ಥಾನದ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಹಳೆಯ ಜಾಗದಲ್ಲಿ ರಾಮೇಶ್ವರ ಕಾಲೋನಿಯಿಂದ ಬರುವ ರಸ್ತೆಯನ್ನು ನೇರವಾಗಿ ಮುಖ್ಯ ರಸ್ತೆಗೆ ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ. ಅಲ್ಲದೆ, ಮುಖ್ಯ ರಸ್ತೆಗೆ ಸೇರುವ ಕಡೆ ರಸ್ತೆ ಉಬ್ಬು ನಿರ್ಮಿಸಿದರೆ ವಾಹನಗಳ ವೇಗ ಕಡಿಮೆಯಾಗಿ ಅಪಘಾತಗಳ ಸಾಧ್ಯತೆ ತಗ್ಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  

ರಾಮೇಶ್ವರ ಕಾಲೋನಿ, ಮೈಗೂರ್ ಕಾಲೋನಿ, ಎಸ್‌ಬಿಐ ಕಾಲೋನಿ ಹಾಗೂ ಶ್ರೀ ಸಜ್ಜೆ ಹನುಮಾನ್ ಬಡಾವಣೆಯ ನಿವಾಸಿಗಳು ಈ ಒತ್ತಾಯ ಮಾಡಿದ್ದಾರೆ. ಸಮಸ್ಯೆ ಕುರಿತು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಲೋಕೋಪಯೋಗಿ ಇಲಾಖೆಯ ಜೆಇ ಅವರಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆಯದೆ ಹಾರಿಕೆ ಉತ್ತರ ನೀಡಲಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.  

ಸ್ಥಳಕ್ಕೆ ಆಗಮಿಸಿದ್ದ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಅವರಿಗೆ ನಿವಾಸಿಗಳು ಸಮಸ್ಯೆ ವಿವರಿಸಿದರು. ಅವರು ಬಾಗಲಕೋಟೆ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು. ಸಂಬಂಧಪಟ್ಟವರಿಂದ ವರದಿ ತರಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.  ಈ ಭರವಸೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ, ರಸ್ತೆ ತಡೆ, ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.