ಲೋಕದರ್ಶನ ವರದಿ
ಕನಕಗಿರಿ 06: ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳ ಆದೇಶದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಇರುವವರು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ತಹಶೀಲ್ದಾರ್ ರವಿ ಅಂಗಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗುರ್ರುವಾರ ಅಕ್ರಮ ಮರಳು ಸಾಗಾಣಿಕೆ ಮತ್ತು ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸುವ ಕುರಿತು ಚಲಿತ ತಂಡದ ಅಧಿಕಾರಿಗಳು ಸಭೆಯನ್ನು ನಡೆಸಿ ಅವರು ಮಾತನಾಡಿದರು. ಅಕ್ರಮ ಮರುಳ ಸಾಗಾಣಿಕೆಯನ್ನು ತಡೆಗಟ್ಟಲು ಪ್ರತಿ ದಿನ ರಾತ್ರಿ ವೇಳೆ ಒಬ್ಬರಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ. ನೇಮಿಸಿರುವ ಅಧಿಕಾರಿಗಳು ದಿನನಿತ್ಯವೂ ಮಾಹಿತಿಯನ್ನು ನೀಡಬೇಕು. ಅಕ್ರಮ ಮರುಳು ಸಾಗಾಣಿಕೆ ತಡೆಗಟ್ಟಲು ಎಲ್ಲರ ಸಹಕಾರ ಮುಖ್ಯ. ಅಕ್ರಮ ಕಂಡು ಬಂದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಪ್ರಕರಣವನ್ನು ದಾಖಲಿಸಬೇಕು. ಅದರಲ್ಲೂ ಸಾರ್ವಜನಿಕರು ಸಹಕಾರವು ಮುಖ್ಯ ಎಂದರು.
ಕನಕಗಿರಿ ತಾ.ಪಂ.ಇ.ಒ ಅರುಣಕುಮಾರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪರಸಪ್ಪ, ಪಿಎಸ್ಐ ಪ್ರಶಾಂತ, ಲೋಕೋಪಯೋಗಿ ಇಲಾಖೆ ಎಇಇ ಸುರೇಶ, ಉಪ ತಹಶೀಲ್ದಾರ್ ವಿಶ್ವೇಶ್ವರಯ್ಯಸ್ವಾಮಿ, ಕಂದಾಯ ನೀರಿಕ್ಷಕರಾದ ಗುರುರಾಜ, ಅಕ್ಬರ ಸಾಬ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆ ಮತ್ತು ಅಕ್ರಮ ಚಟುವಟಿಕೆಯನ್ನು ತಡೆಗಟ್ಟಲಿ ರಚನೆ ಮಾಡಿರುವ ಚಲಿತದಳವು ಸಂಪೂರ್ಣವಾಗಿ ತಾಲೂಕಿನ ನಿಷ್ಕೃಯವಾಗಿದೆ ಮತ್ತು ತಂಡದಲ್ಲಿ ಇರುವ ಅಧಿಕಾರಿಗಳು ಸರಿಯಾಗಿ ಕೆಲಸವನ್ನು ನಿರ್ವಹಿಸಿದೇ ಕಾಲಹರಣವನ್ನು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಅವ್ಯವತವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಕಡಿವಾಣ ಹಾಕಲು ತಾಲೂಕು ಆಡಳಿತ ಮತ್ತು ಚಲಿತದಳ ವಿಫಲವಾಗಿದೆ.ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.