ಜಮಖಂಡಿ ಓಲೆಮಠದ ಆಶ್ರಯದಲ್ಲಿ ಜನಜಾಗೃತಿ ಕಾರ್ಯಕ್ರಮ

ಜಮಖಂಡಿ ಓಲೆಮಠದ ಆಶ್ರಯದಲ್ಲಿ ಜನಜಾಗೃತಿ ಕಾರ್ಯಕ್ರಮ Public awareness program under the auspices of Jamkhandi Ole Math

ಲೋಕದರ್ಶನ ವರದಿ 

ಜಮಖಂಡಿ 05 : ತಂದೆ, ತಾಯಿಗಳು ಕೊಟ್ಟ ಸಂಸ್ಕಾರದಂತೆ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ದುಡ್ಡಿನ ಮಹತ್ವ ಮತ್ತು ಅನ್ನದ ಬೆಲೆಯನ್ನು ತಿಳಿಸಿಕೊಡಬೇಕು ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು. 

ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಸಂಜೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ಚಿಕ್ಕಮಕ್ಕಳ ಮುಂದೆ ಸಣ್ಣಪುಟ್ಟ ಸುಳ್ಳುಗಳನ್ನು ಹೇಳಿದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮಹಾಸುಳ್ಳುಗಾರ, ಮೋಸಗಾರ ಹಾಗೂ ದರೋಡೆಕೋರರಾಗುವ ಅಪಾಯವಿರುತ್ತದೆ. ಆದ್ದರಿಂದ ಪಾಲಕರು ಮಕ್ಕಳ ಮುಂದೆ ಸುಳ್ಳು ಮಾತನಾಡಬಾರದು ಎಂದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ದುಶ್ಚಟಗಳನ್ನು ಬಿಡಿಸಿ ಮನೆಗೆ ಬೆಳಕು ಕೊಡುವ ಸತ್ಕಾರ್ಯವನ್ನು ಓಲೆಮಠದ ಪೂಜ್ಯರು ಮಾಡಿದ್ದಾರೆ. ಹಾಗಾಗಿ ದುಶ್ಚಟಗಳನ್ನು ಬಿಡುವುದಾಗಿ ಪ್ರಮಾಣ ಮಾಡಿದ ಯುವಕರು ಮರಳಿ ದುಶ್ಚಟಕ್ಕೆ ಅಂಟಿಕೊಳ್ಳಬಾರದು ಎಂದು ಸಲಹೆ ನೀಡಿದರು. 

ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಝುಂಜರವಾಡದ ಬಸವರಾಜ ಶರಣರು ಪ್ರವಚನ ನೀಡಿದರು. ತಾಲ್ಲೂಕಿನ ವಿವಿಧ ಪ್ರಕಾರಗಳ ಕಲಾವಿದರನ್ನು ಓಲೆಮಠದ ಪರವಾಗಿ ಸನ್ಮಾನಿಸಿ ಜೀವಮಾನ ಸಾಧನೆಯ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಬಿ.ಜಿ. ಪಾಟೀಲ, ನಿಖಿಲ ಮಹಾಬಳಶೆಟ್ಟಿ, ವೈ.ಎಸ್‌. ನ್ಯಾಮಗೌಡ, ಶಿವಗೌಡ ಪಾಟೀಲ, ಧರೆಪ್ಪ ಆಲಗೂರ, ರುದ್ರಯ್ಯಸ್ವಾಮಿ, ಸಂಜೀವ ಹುದ್ದಾರ, ಸಂಗಮೇಶ ಗೆಣ್ಣೂರ, ಸತೀಶ ಗೆಣ್ಣೂರ, ಡಾ.ಟಿ.ಪಿ. ಗಿರಡ್ಡಿ, ಸದಾನಂದ ಬಾಗೇವಾಡಿ ಇತರರು ಇದ್ದರು. ಆನಂದ ಬ್ಯಾಳಿ, ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನೇಮಿನಾಥ ನ್ಯಾಮಗೌಡ ನಿರೂಪಿಸಿದರು.