ಜನರ ಸಮಸ್ಯೆಗಳಿಗೆ ಮಾನವೀಯ ಸ್ಪಂದನೆ ನೀಡಿ; ನೀರು, ಬೀಜ-ಗೊಬ್ಬರ ಸಮರ​‍್ಕವಾಗಿ ಪೂರೈಕೆ ಮಾಡಿ : ಬಸವರಾಜ ಬೊಮ್ಮಾಯಿ

ಜನರ ಸಮಸ್ಯೆಗಳಿಗೆ ಮಾನವೀಯ ಸ್ಪಂದನೆ ನೀಡಿ; ನೀರು, ಬೀಜ-ಗೊಬ್ಬರ ಸಮರ​‍್ಕವಾಗಿ ಪೂರೈಕೆ ಮಾಡಿ : ಬಸವರಾಜ ಬೊಮ್ಮಾಯಿ Provide a humane response to people's problems; Provide water, seeds and fertilizers in a timely man

ಗದಗ 09 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳನ್ನು ಸಮರ​‍್ಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಸ್ಪಷ್ಟ ಗುರಿ, ಬದ್ಧತೆ ಹಾಗೂ ಮಾನವೀಯ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮುಖವಾಗಿ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹೆಚ್ಚು ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದರು.

ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಯುದ್ಧ ಸೇರಿದಂತೆ ಹಲವು ಬೆಳವಣಿಗೆಗಳು ದೇಶದ ಆರ್ಥಿಕತೆ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಸರ್ಕಾರ ತಮ್ಮೊಂದಿಗಿದೆ ಎಂಬ ಭರವಸೆ ಮೂಡಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳಲ್ಲಿ ಧನಾತ್ಮಕ ಚಿಂತನೆ ಮತ್ತು ಸೇವಾ ಮನೋಭಾವ ಇರಬೇಕು. "ಆಳ್ವಿಕೆ ಮಾಡುವವರು ಆಡಳಿತ ಮಾಡಲು ಹೊರಟಿದ್ದಾರೆ, ಆಡಳಿತ ಮಾಡುವವರು ಆಳ್ವಿಕೆ ಮಾಡಲು ಹೊರಟಿದ್ದಾರೆ. ಇದು ಸರಿಯಾದ ಕ್ರಮವಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದ ಬೊಮ್ಮಾಯಿ, ಮುಖ್ಯ ನೀರು ಸರಬರಾಜು ಪೈಪ್ಗಳಿಗೆ ಅಳವಡಿಸಲಾಗಿರುವ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸುವಂತೆ ಹಿಂದಿನ ಸಭೆಯಲ್ಲಿಯೇ ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.