7 ಗಂಟೆ ನಿರಂತರ ವಿದ್ಯುತ್ ನೀಡಿ. ಕೃಷ್ಣಾ ನದಿ ತೀರದ ರೈತರಿಂದ ಸಚಿವ ಲಕ್ಷ್ಮಣ ಸವದಿಗೆ ಮನವಿ

7 ಗಂಟೆ ನಿರಂತರ ವಿದ್ಯುತ್ ನೀಡಿ. ಕೃಷ್ಣಾ ನದಿ ತೀರದ ರೈತರಿಂದ ಸಚಿವ ಲಕ್ಷ್ಮಣ ಸವದಿಗೆ ಮನವಿ Provide 7 hours of uninterrupted power: Farmers along the Krishna riverbanks appeal to Minister Laxm

ಲೋಕದರ್ಶನ ವರದಿ 

ಕಾಗವಾಡ 15: ತಾಲೂಕಿನ ಕೃಷ್ಣಾ ನದಿ ತೀರದ ಜುಗೂಳ, ಮಂಗಾವತಿ, ಶಹಾಪೂರ, ಶಿರಗುಪ್ಪಿ ಮತ್ತು ಕಾಗವಾಡದ ರೈತರು ತಮ್ಮ ಕೃಷಿ ಪಂಪ್ ಸೆಟ್‌ಗಳಿಗೆ 7 ಗಂಟೆ ನಿರಂತರ ಥ್ರೀಫೆಸ್ ವಿದ್ಯುತ್ತ ನೀಡುವಂತೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮಂಗಳವಾರ ದಿ. 15 ರಂದು ಪಟ್ಟಣದಲ್ಲಿ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ. 

ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ನಿಭಾಯಿಯಿಸುವ ಸಲುವಾಗಿ ಸರ್ಕಾರದ ಆದೇಶದ ಮೇರೆಗೆ ವಾರದಲ್ಲಿ 2 ದಿನ ಲೋಡ್ ಶೆಡಿಂಗ್ ಮಾಡಿ, ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೆಳೆದಿರುವ ಬೆಳೆಗಳು ಒಣಗಿ, ಸಂಕಷ್ಟ ಎದುರಾಗಲಿದೆ.

ಕೃಷ್ಣಾ ನದಿ ತೀರದ ಪಶ್ಚಿಮ ಭಾಗದ ಗ್ರಾಮಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಮತ್ತು ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ ನದಿಗೆ ನೀರು ಹರಿದು ಬರುತ್ತಿರುವುದರಿಂದ ನಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ನಮಗೆ 7 ಗಂಟೆ ನಿರಂತರ ವಿದ್ಯುತ್ತ ನೀಡಿ, ಎಂದು ರೈತರು ಆಗ್ರಹಿಸಿದ್ದಾರೆ. 

ಈ ವೇಳೆ ಜುಗೂಳ ಗ್ರಾಮದ ಮುಖಂಡ ಅಣ್ಣಾಸಾಬ ಪಾಟೀಲ ಮಾತನಾಡಿ, ಈ ಭಾಗದ ಬಹುತೇಕ ರೈತರು ಕೃಷ್ಣಾ ನದಿ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಾರೆ. ಜಿಲ್ಲಾಧಿಕಾರಗಳು ರೈತರ ಕೃಷಿ ಪಂಪಸೇಟ್‌ಗಳಿಗೆ ವಾರದಲ್ಲಿ ಎರಡು ದಿನ ಲೋಡ್ ಶೆಡ್ಡಿಂಗ್ ಮಾಡುವಂತೆ ಆದೇಶ ನೀಡಿದ್ದು, ರೈತರಿಗೆ ತುಂಬಾ ತೊಂದರೆಯಾಗುತ್ತಿದೆ.

ಕೃಷ್ಣಾ ನದಿಯಲ್ಲಿ ನೀರು ಲಭ್ಯವಿದ್ದರೂ, ವಿದ್ಯತ್ ಸ್ಥಗಿತಗೊಳಿಸು ವುದರಿಂದ ಸರಿಯಾಗಿ ಬೆಳೆಗಳಿಗೆ ನೀರು ಹಾಯಿಸಲು ಸಾದ್ಯವಾಗದೇ ಬೆಳೆಗಳು ಹಾನಿಯಾಗುವ ಸಾಧ್ಯತೆ ಇದ್ದು, ರೈತರು ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಲಿದೆ. ಕೂಡಲೇ ಲೋಡ್ ಶೆಡ್ಡಿಂಗ್ ಆದೇಶವನ್ನು ಹಿಂಪಡೆದು, ನಿರಂತರ ವಿದ್ಯುತ್ತ ನೀಡಿ, ರೈತರನ್ನು ಕಾಪಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. 

ಕೃಷ್ಣಾ ನದಿಯ ಮತ್ತೊಂದು ಭಾಗದಲ್ಲಿ ಮಹಾರಾಷ್ಟ್ರದ ಗ್ರಾಮಗಳಿದ್ದು, ಅಲ್ಲಿ ನಿರಂತರ ವಿದ್ಯುತ್ತ ಪೂರೈಕೆಯಾಗುತ್ತಿದೆ. ಅಲ್ಲಿಯ ರೈತರು ಕೃಷ್ಣಾ ನದಿ ನೀರನ್ನು ಸಂಪೂರ್ಣವಾಗಿ ಬಳಿಕೆ ಮಾಡಿಕೊಳ್ಳುತ್ತಿದ್ದಾರೆ.

ಆದರೇ ಕರ್ನಾಟಕ ಭಾಗದ ರೈತರು ಮಾತ್ರ ಲೋಡ್ ಶೆಡ್ಡಿಂಗ್‌ದಿಂದಾಗಿ ನದಿಯಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹರಿಸಲಾಗದೇ ಅಸಹಾಯಕರಾಗಿದ್ದಾರೆ. ಆದ್ದರಿಂದ ನಮಗೆ ನಿರಂತರ ವಿದ್ಯುತ್ ನೀಡಿ, ಎಂದು ಆಗ್ರಹಿಸಿದ್ದಾರೆ. 

ಈ ವೇಳೆ ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ಅನಿಲ ಕಡೋಲೆ, ಅನಿಲ ಸುಂಕೆ, ಭಾಸ್ಕರ ಪಾಟೀಲ, ಬಾಳಗೌಡ ಪಾಟೀಲ, ಸುರೇಶ ಪಾಟೀಲ, ರಾಜೇಂದ್ರ ಕಡೋಲೆ, ಭಾಲಚಂದ್ರ ಅಂಬಿ, ಪ್ರಮೋದ ಪಾಟೀಲ, ಅರುಣಕುಮಾರ ಮಿಣಚೆ, ತಾತ್ಯಾಸಾಬ ಜಾಧವ, ಅಭಯಕುಮಾರ ಅಕಿವಾಟೆ, ರಾಜು ಜುಗಳೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.