ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಿದ್ದರೆ ಹೋರಾಟ ಎಚ್ಚರಿಕೆ

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಿದ್ದರೆ ಹೋರಾಟ ಎಚ್ಚರಿಕೆ  Protest warning if local body elections are not held

ಲೋಕದರ್ಶನ ವರದಿ 

   ಹಾವೇರಿ 14 :ರಾಜ್ಯದ ಪ್ರಗತಿಗೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಸ್ಥಳೀಯ ಸರ್ಕಾರಗಳು ಬಹುಮುಖ್ಯವಾಗಿದ್ದು,ಸರ್ಕಾರ ಸ್ಥಳೀಯ ಸರ್ಕಾರಗಳ ಚುನಾವಣೆಯನ್ನು ಶೀಘ್ರವಾಗಿ ನಡೆಸಲು ಮುಂದಾಗಬೇಕು ಎಂದು ಗ್ರಾಮ ಸ್ವರಾಜ್ಯ-ಕರ್ನಾಟಕದ ರಾಜ್ಯಾಧ್ಯಕ್ಷರಾದ ಸತೀಶ ಕಾಡಶೆಟ್ಟಿಹಳ್ಳಿ ಅವರು ಹೇಳಿದರು. ದಾಂಡೇಲಿಯಲ್ಲಿ ಜರುಗಿದ ಗ್ರಾಮ ಸ್ವರಾಜ್ಯ-ಕರ್ನಾಟಕ ಸಂಘಟನೆಯ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಸರ್ಕಾರಕ್ಕೆ ಶೀಘ್ರವಾಗಿ ಚುನಾವಣೆ ಮಾಡುವಂತೆ ಒತ್ತಾಯಿಸಿದರು. 

ರಾಜ್ಯದ ಅಭಿವೃದ್ಧಿಗೆ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿ,ತಾಲ್ಲೂಕ ಪಂಚಾಯತಿ, ಜಿಲ್ಲಾ ಪಂಚಾಯತ, ನಗರಸಭೆ,ಪಟ್ಟಣ ಪಂಚಾಯತ,ಪುರಸಭೆ,ಮಹಾನಗರ ಪಾಲಿಕೆಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವದ ಯಶಸ್ವಿಗೆ ಸ್ಥಳೀಯ ಸರ್ಕಾರಗಳ ಶ್ರಮ ನಿರಂತರವಾಗಿದೆ. ಗ್ರಾಮೀಣ ಭಾಗದಲ್ಲಿ ಜನಪ್ರತಿನಿಧಿಗಳು ಇಲ್ಲದೇ ಗ್ರಾಮಗಳು ಸಮಸ್ಯೆಗಳ ಆಗರವಾಗಿವೆ. ಆಡಳಿತಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಣೆ ಇಲ್ಲದೇ ಆಡಳಿತ ಯಂತ್ರ ಕುಸಿದು ಹೋಗಿದೆ.

ಜಿಪಂ,ತಾಪಂ ಚುನಾವಣೆ ಇಲ್ಲದೇ 6 ವರ್ಷಗಳು ಕಳದಿವೆ.ಗ್ರಾಪಂ ಅವಧಿ ಮುಗಿದು ಆರು ತಿಂಗಳು ಆಗಿವೆ.ರಾಜ್ಯದ ಎಷ್ಟೋ ನಗರ ಸರ್ಕಾರಗಳ ಅವಧಿ ಮುಗಿದು ಅಭಿವೃದ್ಧಿ ಕುಂಠಿತವಾಗಿದೆ. ಚುನಾವಣೆ ಶೀಘ್ರವಾಗಿ ನಡೆಸುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಗ್ರಾಮ ಸ್ವರಾಜ್ಯ ಕರ್ನಾಟಕ ರಾಜ್ಯದ ತುಂಬೆಲ್ಲ ಅಭಿಯಾನ ಪ್ರಾರಂಭ ಮಾಡಲಾಗುತ್ತಿದೆ. ಸ್ಥಳೀಯ ಸರ್ಕಾರ ಇಲ್ಲದೇ ಇರುವುದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ ಎಂಬುವುದನ್ನು ಜನತೆ ಎದುರಿಸುತ್ತಿದ್ದಾರೆ.

ಜನರ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಅನಿವಾರ್ಯ ಎಂಬುದನ್ನು ಜನರು ತಿಳಿದಿದ್ದಾರೆ. ಪ್ರಜಾಪ್ರಭುತ್ವದ ಯಶಸ್ವಿಯಾಗಲು ಸ್ಥಳೀಯ ಸರ್ಕಾರಗಳಿಲ್ಲಿ ಜನಪ್ರತಿನಿಧಿಗಳು ಇರುವುದು ಅಗತ್ಯವಾಗಿದೆ.ಚುನಾವಣೆ ಆಯೋಗ ಹಾಗೂ ರಾಜ್ಯ ಸರ್ಕಾರ ಎಲ್ಲಾ ಸ್ಥಳೀಯ ಸರ್ಕಾರಗಳು ಚುನಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ರಾಜ್ಯಾಧ್ಯಕ್ಷರಾದ ಸತೀಶ ಕಾಡಶೆಟ್ಟಿಹಳ್ಳಿ ಅವರು ಸಭೆಯ ಅಧ್ಯಕ್ಷತೆವಹಿಸಿ ಸರ್ಕಾರವನ್ನು ಒತ್ತಾಯಿಸಿದರು.  

 ಇದೇ ಅವಧಿಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಲಾಯಿತು.ರಾಜ್ಯದಲ್ಲಿನ ಜನರ ಪರವಾಗಿ ಕೆಲಸ ಮಾಡಲು ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ಗ್ರಾಮ ಸ್ವರಾಜ್ಯ ಕರ್ನಾಟಕ ಮುಂದಿನ ದಿನಮಾನಗಳಲ್ಲಿ ಜಿಲ್ಲಾ ಘಟಕ, ರಾಜ್ಯ ಘಟಕ, ಹೋಬಲಿ ಘಟಕ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲು ಶ್ರಮಿಸುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಮ್ ಚಲಪತಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಆನಂದ ಹವಳಣ್ಣನವರ,ಪಂಪಯ್ಯ,ಪ್ರದೀಪ ಪಾಟೀಲ,ರಾಜ್ಯ ಮಾಧ್ಯಮ ಕಾರ್ಯದರ್ಶಿ ನಿಂಗಪ್ಪ ಆರೇರ,ಸಹ ಕಾರ್ಯದರ್ಶಿ ಚಂದ್ರಮೋಳಿ,ರಾಜ್ಯ ಖಜಾಂಚಿ ನಾಗೇಶ,ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಪ್ರವೀಣ ಅರಕೇರಿ,ರಾಜ್ಯ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.