ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ: ಮನವಿ

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ: ಮನವಿ  Protest condemning the NEET exam question paper leak: Memorandum

ದೇವರಹಿಪ್ಪರಗಿ 26: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಅವ್ಯವಸ್ಥೆ ಖಂಡಿಸಿ ಹಾಗೂ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು ಹೋರಾಟ ಬೆಂಬಲಿಸಿ ಶನಿವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೆ ಸ್ಥಾಪಿತ ಹಾಗೂ ತಾಲೂಕು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.  ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರಗತಿಪರ ಸಂಘಟನೆಯ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ, ಮುನೀರ್ ಅಹ್ಮದ್ ಮಳಖೇಡ, ರಾಜು ಮೆಟಗಾರ, ರಹೀಮಾನ ಕನಕಲ್, ಶಂಕರಲಿಂಗ ಜಮಾದಾರ, ಮಲಕು ಬಾಗೇವಾಡಿ ಸೇರಿದಂತೆ ಅನೇಕರ ಮುಖಂಡರು ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ದೇಶದ ಯುವಜನರ ಭವಿಷ್ಯಕ್ಕೆ ಧಕ್ಕೆ ತರುತ್ತಿರುವ ದೇಶದ ಪರೀಕ್ಷಾ ಅವ್ಯವಸ್ಥೆಯನ್ನು ಸರಿಪಡಿಸಬೇಕು.

ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ಅಶ್ರವಾಯು ಪ್ರಯೋಗಿಸಿ, ಲಾಠಿ ಬೀಸಿರುವುದು ಖಂಡನೀಯ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ. ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಅಲ್ಲದೇ ಕೇಂದ್ರ ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು 3 ಬೇಡಿಕೆಗಳನ್ನು ಈಡೇರಿಸುವಂತೆ ಪರಿಸರವಾದಿ ಸೋನಮ್ ವಾಂಗ್ಚುಕ, ಸಿಜೆಪಿ ಪಕ್ಷದ ಅಭಿಜಿತ್ ದೀಪ್ಕೆ ಹಾಗೂ ಅವರ ಪಕ್ಷದ ಮುಖಂಡರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಿದರು.  ಮುಖಂಡರುಗಳಾದ ವಿನಾಯಕ ಗುಣಸಾಗರ, ಅಶೋಕ ಚಲವಾದಿ, ರಾಜಕುಮಾರ ಸಿಂದಗೇರಿ, ಶರಣು ಸಿಂಧೆ, ಪರಶುರಾಮ ದಿಂಡವಾರ, ಲಕ್ಕಪ್ಪ ಬಡಿಗೇರ, ಬಸವರಾಜ ಇಂಗಳಗಿ, ನಾಜೀರಸಾಬ ಬೀಳಗಿ, ಯಮನಪ್ಪ ಭೂತಾಳಿ, ಪರಶುರಾಮ ಬಡಿಗೇರ, ಮಹಾಂತೇಶ ಚಲವಾದಿ, ಅಶೋಕ ಗುಡಿಸಲಮನಿ ಸೇರಿದಂತೆ ಹಲವಾರು ಜನ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.