ಒಪಿಎಸ್ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿ: ಡಾ. ಬಸವರಾಜ ಬಳ್ಳಾರಿ

ಒಪಿಎಸ್ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿ: ಡಾ. ಬಸವರಾಜ ಬಳ್ಳಾರಿ  Government should take steps to implement OPS: Dr. Basavaraja Ballari

ಲೋಕದರ್ಶನ ವರದಿ 

ಗದಗ 25: ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಗದಗ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಆಗ್ರಹಿಸಿದರು.  

ನಗರದ ರಾಯಲ್ ವಿಲ್ಲಾ ಹೋಟೆಲ್ನಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ, ಬೆಂಗಳೂರು ಹಾಗೂ ಗದಗ ಜಿಲ್ಲಾ ಘಟಕ ಆಯೋಜಿಸಿದ್ದ ಆರೋಗ್ಯ ಇಲಾಖೆ ನೌಕರರ  ಸಂಕಿರಣ ಹಾಗೂ ಪದೋನ್ನತಿ ಪಡೆದ ಅಧಿಕಾರಿಗಳು ಮತ್ತು ನಿವೃತ್ತ ನೌಕರರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಆರೋಗ್ಯ ಇಲಾಖೆ ಸಿಬ್ಬಂದಿ 24ಸ7 ಸೇವೆ ಸಲ್ಲಿಸುತ್ತಿದ್ದು, ಅವರ ಕಾರ್ಯ ಶ್ಲಾಘನೀಯವಾಗಿದೆ. ಆರೋಗ್ಯ ನೀರೀಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಗೆ ನಿರಂತರ ತರಬೇತಿ ಅಗತ್ಯವಿದ್ದು, ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆನ್ಲೈನ್ ಹಾಜರಾತಿ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ಹೇಳಿದರು.  

ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸುವ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು. ಉತ್ತಮ ಸೇವೆ ಸಲ್ಲಿಸಿದವರು, ಪದೋನ್ನತಿ ಪಡೆದವರು ಹಾಗೂ ನಿವೃತ್ತ ನೌಕರರನ್ನು ಗೌರವಿಸುವುದು ಇತರ ಸಿಬ್ಬಂದಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.  ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹಿತರಕ್ಷಣೆಗಾಗಿ ಸಂಘ ಸದಾ ಬದ್ಧವಾಗಿದ್ದು, ರಾಜ್ಯದಾದ್ಯಂತ ನೌಕರರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.  

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಿದ್ದಪ್ಪ ಎನ್‌. ಲಿಂಗದಾಳ ಮಾತನಾಡಿ, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಎಲ್ಲ ನೌಕರರು ಸಾರ್ವಜನಿಕ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಸಮಾನತೆ ಹಾಗೂ ಮಾನವೀಯತೆಯಿಂದ ಸೇವೆ ಸಲ್ಲಿಸಬೇಕು ಎಂದರು.  

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಗಡಾದ ಮಾತನಾಡಿ, ಸಾರ್ವಜನಿಕರಿಗೆ ಕರುಣೆ ಮತ್ತು ಆತ್ಮೀಯತೆಯಿಂದ ಆರೋಗ್ಯ ಸೇವೆ ನೀಡುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.