ಮುಂಡಗೋಡ ಧರ್ಮಾಕಾಲೋನಿ ನಾಗರಿಕರ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮುಂಡಗೋಡ ಧರ್ಮಾಕಾಲೋನಿ ನಾಗರಿಕರ ಹೋರಾಟ ಸಮಿತಿಯಿಂದ ಪ್ರತಿಭಟನೆ Protest by Mundagoda Dharma Colony Citizens' Struggle Committee

ಕಾರವಾರ 27 : ಮನೆ ಭೂಮಿಗೆ ಹಕ್ಕು ಪತ್ರ ನೀಡಲು ಸರ್ಕಾರಕ್ಕೆ  ಆಗ್ರಹಿಸಿ ಮುಂಡಗೋಡ ಧರ್ಮಾಕಾಲೋನಿ ನಾಗರಿಕರ ಹೋರಾಟ ಸಮಿತಿಯಿಂದ ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.  ಮುಂಡಗೋಡ ತಾಲೂಕು ಮಳಗಿ ಗ್ರಾಮ ಪಂಚಾಯತ್‌ನ ಧರ್ಮ ಕಾಲೋನಿಯ ಜಮೀನಿಗೆ ಹಾಗೂ ಮನೆಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಸೋಮವಾರ  ಪ್ರತಿಭಟನಾ ಮೆರವಣಿಗೆ ಕಾರವಾರ ಬಸ್ ನಿಲ್ದಾಣದಿಂದ ಹೊರಟು ನಗರದ ಮುಖ್ಯರಸ್ತೆಗಳಲ್ಲಿ ಸಾಗಿ ಬಂತು. ನಂತರ ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನಾಕಾರರು ಸಮಾವೇಶಗೊಂಡರು. ಪ್ರತಿಭಟನೆಯ ನೇತೃತ್ವವಹಿಸಿದ್ದ  ಧರ್ಮಾಕಾಲೋನಿ ನಾಗರಿಕರ ಹೋರಾಟ ಸಮಿತಿಯ ಸಂಚಾಲಕರಾದ ಗಣಪತಿ ಹೆಗಡೆ ಮಾತನಾಡಿ, ಹಲವಾರು ವರ್ಷಗಳಿಂದ ಈ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸುತ್ತಿದ್ದರೂ, ಸರ್ಕಾರದ ನಿರ್ಲಕ್ಷ್ಯವಹಿಸುತ್ತಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.   

ಮಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1964 ರಲ್ಲಿ ನಿರ್ಮಿಸಿದ ಧರ್ಮಾ ಜಲಾಶಯದ ಹಿನ್ನೀರಿನಲ್ಲಿ ಬಹಳಷ್ಟು ಕುಟುಂಬಗಳು ಭೂಮಿ ಹಾಗೂ ವಸತಿ ಕಳೆದುಕೊಂಡು ನಿರಾಶ್ರಿತರಾದರು. ಈ ನಿರಾಶ್ರಿತರಿಗಾಗಿ ಅಂದಿನ ಸರ್ಕಾರವು ಜನಗೇರಿ ಗ್ರಾಮ ಸ.ನಂ 30 ಮತ್ತು 32 ಹಾಗೂ ವೀರಾಪುರ ಗ್ರಾಮದ ಸ.ನಂ 28ರಲ್ಲಿ ಇರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶದಲ್ಲಿ ಪುನರ್ವಸತಿಯನ್ನು ಸರ್ಕಾರ ಕಲ್ಪಿಸಿ ಕೊಟ್ಟಿತ್ತು. ಭೂಮಿಯನ್ನು ಅಳತೆ ಮಾಡಿ ಹೊಲಗಳಿಗೆ ಜಂಟಿಯಾಗಿ ಪಹಣಿಪತ್ರಿಕೆ ಕೊಟ್ಟಿರುತ್ತದೆ. ನಿರಾಶ್ರಿತರು ವಾಸ ಮಾಡಲಿಕ್ಕಾಗಿ ಜನಗೇರಿ ಸ.ನಂ. 32 ಮತ್ತು ವೀರಾಪುರ ಸ.ನಂ. 28ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ, ಮಳಗಿ ಗ್ರಾಮ ಪಂಚಾಯತದಲ್ಲಿ ಮನೆ ದಾಖಲಾಗಿ ಮನೆ ನಂಬರ್ ಗಳನ್ನು ನೀಡಲಾಗಿದೆ. ಆದರೆ ಹಕ್ಕು ಪತ್ರಗಳನ್ನು ಮನೆಯ ವಾರಸುದಾರರಿಗೆ ನೀಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಕೆ.ಜೆ.ಪಿ. ಮಾಡದೇ ಇರುವುದರಿಂದ ಅರಣ್ಯ ಇಲಾಖೆಯವರು ಈ ಸರ್ವೇ ನಂಬರಿಗೆ ಸಂಬಂಧಿಸಿದ ಜಮೀನು ಮತ್ತು ನಿವೇಶನ ತಮಗೆ ಸೇರಿದ್ದೆಂದು ಅರಣ್ಯ  ಇಲಾಖೆಯ ಸರ್ವೆ ಕಲ್ಲುಗಳನ್ನು  ಹಾಕಿ  ಹೋಗಿರುತ್ತಾರೆ. ಅರಣ್ಯ ಇಲಾಖೆಯವರ ಈ ಕ್ರಮವನ್ನು ವಿರೋಧಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ,  ಏನೂ ಪ್ರಯೋಜನವಾಗಿಲ್ಲ.  

ಈ ಹಿಂದೆ ತಹಶೀಲ್ದಾರರಿಗೂ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ಕೂಡಲೇ ಎಲ್ಲಾ ರೈತರ ಪಹಣಿ ಪತ್ರಿಕೆಯಲ್ಲಿ ಎಲ್ಲಾ ರೈತರ ಹೆಸರನ್ನು ಒಟ್ಟಾಗಿ ಸೇರಿಸಿದ್ದನ್ನು ರದ್ದುಪಡಿಸಿ ಆಯಾ ರೈತರ ಹೆಸರಿನಲ್ಲಿ ಪ್ರತ್ಯೇಕ ಪಹಣಿ (ಆರಿ​‍್ಟ.ಸಿ) ಬರುವಂತೆ ಮಾಡಬೇಕು. ಎಲ್ಲಾ ನಿವಾಸಿಗಳಿಗೆ ನಿವೇಶನ ಹಕ್ಕು ಪತ್ರ ನೀಡಬೇಕು.  ಸರ್ವೆ ಮಾಡಿ ನಕಾಶೆ ಮಾಡಲು ಜಿಲ್ಲಾಡಳಿತ, ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಲಹೆಗಾರರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಹಲವಾರು ವರ್ಷಗಳಿಂದ ಧರ್ಮಾ ಕಾಲೋನಿಯ ಜನರು ಭೂಮಿ ಹಾಗೂ ನಿವೇಶನಕ್ಕೆ ಹಕ್ಕುಪತ್ರ ಸಿಗದೇ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಾ ಬಂದಿದ್ದು, ನಿರಂತರವಾಗಿ ಒಗ್ಗಟ್ಟಿನ ಹೋರಾಟವನ್ನು ಕಟ್ಟುತ್ತಿರುವುದು ಶ್ಲಾಘನೀಯವಾದದ್ದು.

ಈ ವ್ಯವಸ್ಥೆ ಹಾಗೂ ಸರ್ಕಾರಗಳು ಜಡ್ಡುಗಟ್ಟಿದ್ದು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ನಿರ್ಲಕ್ಷ್ಯ ವಹಿಸುತ್ತವೆ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಸಂಘಟಿತ ಹೋರಾಟವನ್ನು ಮುಂದುವರಿಸಬೇಕು ಹಾಗೂ ಈ ಹೋರಾಟ ಜಿಲ್ಲೆಯ ಇತರ ರೈತ-ಕಾರ್ಮಿಕರ ಹೋರಾಟಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.ಪ್ರತಿಭಟನೆಯ ಕೊನೆಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ  ಮನವಿ ನೀಡಲಾಯಿತು. ಮನವಿಸ್ವೀಕರಿಸಿದ ಅವರು , ಬೇಡಿಕೆಗಳು ನ್ಯಾಯಯುತವಾಗಿದ್ದು, ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ , ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ನೇತೃತ್ವವನ್ನು ಹೋರಾಟ ಸಮಿತಿಯ ಜೀವನ್ ಚಕ್ರಸಾಲಿ, ದುರ್ಗಜ್ಜ , ಜಯದೇವ ನಿಲೇಕಣಿ, ವೀರೇಂದ್ರ ನಾಯ್ಕ್‌, ವಿನಾಯಕ್ ಎಂ ನಾಯ್ಕ್‌, ಚೌಡಪ್ಪ ನಾಯ್ಕ್‌, ಚಂದ್ರು ಹರಿಜನ, ಆನಂದ ಲಮಾಣಿ, ಗಣೇಶ್ ನಾಯ್ಕ್‌, ಭವಾನಿ ಶಂಕರ್ ಎಸ್ ಗೌಡ  ಮುಂತಾದವರು ವಹಿಸಿದ್ದರು.....