ಮಣ್ಣಿನ ಗಣೇಶ ಮೂರ್ತಿ ಬಳಸಿ ಪರಿಸರ ಸಂರಕ್ಷಿಸಿ: ಮೊಹಮ್ಮದ್ ಹಾರೀಸ್ ಸುಮೇರ್

ಮಣ್ಣಿನ ಗಣೇಶ ಮೂರ್ತಿ ಬಳಸಿ ಪರಿಸರ ಸಂರಕ್ಷಿಸಿ: ಮೊಹಮ್ಮದ್ ಹಾರೀಸ್ ಸುಮೇರ್  Protect the environment by using clay Ganesha idols: Mohammed Haris Sumer

ಲೋಕದರ್ಶನ ವರದಿ  

ಬಳ್ಳಾರಿ, ಸೆ. 9: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಕೇವಲ ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಸಬೇಕು. ಮೂರ್ತಿಗಳನ್ನು ಮನೆಗಳಲ್ಲಿಯೇ ವಿಸರ್ಜನೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹಾರೀಸ್ ಸುಮೇರ್ ಕರೆ ನೀಡಿದರು.  

ನಗರದ ಬೆಳಗಲ್ ಕ್ರಾಸ್ನ ಅರಣ್ಯ ಇಲಾಖೆಯ ನರ್ಸರಿ ಹಾಗೂ ಪ್ರಕೃತಿ ಭವನದಲ್ಲಿ ಬುಧವಾರ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಕಾರ್ಯಾಗಾರವನ್ನು ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಬಳಸಬೇಕು. ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳ ಮೂರ್ತಿಗಳನ್ನು ಕೆರೆ, ನದಿ ಸೇರಿದಂತೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಜಲಚರಗಳಿಗೂ ಅಪಾಯ ಉಂಟಾಗುತ್ತದೆ ಎಂದು ಎಚ್ಚರಿಸಿದರು.