ಹಿರಿಯರಲ್ಲಿ ಪ್ರೋಸ್ಟೇಟ್ ಗ್ರಂಥಿ ಹಿಗ್ಗುವಿಕೆ ಅರಿವು ಜಾಗೃತಿ

ಮಾನವನಿಗೆ ಆರೋಗ್ಯವು ನಿಸರ್ಗದ ಅತಿ ಮುಖ್ಯವಾದ ಕೊಡುಗೆಯಾಗಿದೆ. ನಮ್ಮಲ್ಲಿ ಬಹುಮಂದಿ ವಯಸ್ಸಾಗುತ್ತಿದ್ದಂತೆ ಆರೋಗ್ಯದ ಬಗ್ಗೆ ಉದಾಸಿನ ತೋರುವುದು ಹೆಚ್ಚು. ಆರೋಗ್ಯವು ಕೆಟ್ಟು ಹೋಗುವ ವರೆಗೂ ಅದರ ಕಡೆ ನಿರ್ಲಕ್ಷ ಮಾಡಿ, ಕೆಟ್ಟ ನಂತರ ಅದನ್ನು ತಿರುಗಿ ಪಡೆಯಲು ಹೆಚ್ಚು ಶ್ರಮಪಡುತ್ತೇವೆ ಕೆಲವು ಸಂದರ್ಭಗಳಲ್ಲಿ ಅಪಾರ ಹಣವೂ ವ್ಯಯವಾಗುತ್ತದೆ.  

ಇತ್ತೀಚಿನ ದಿನಗಳಲ್ಲಿ ಜನರು ಮನರಂಜನೆಗಾಗಿ ಕೋಟೊಗಟ್ಟಲೆ ಹಣವನ್ನು ಖರ್ಚು ಮಾಡಲು ತಯಾರಿದ್ದಾರೆ. ಆದರೆ ತಮ್ಮ ಆರೋಗ್ಯಕ್ಕಾಗಿ ಖರ್ಚು ಮಾಡಲು ಹಿಂದೇಟು ಹಾಕುತ್ತಾರೆ. ಜೀವ ಇದ್ದರೆ ಜೀವನವಲ್ಲವೆ? ಆರೋಗ್ಯ ಎಂಬ ವಿಚಾರ ಬಂದಾಗ ನಾವು ಯಾವುದೇ ಸಮಯದಲ್ಲೂ ಯಾಮಾರಬಾರದು.  ಸಣ್ಣದಾಗಿ ತೋರುವ ನಮ್ಮ ಇಂದಿನ ನಿರ್ಲಕ್ಷತನ ನಾಳೆ ಬಹುದೊಡ್ಡ ಆರೋಗ್ಯ ಸಮಸ್ಯಯಾಗಿ ನಮಗೆ ತೊಂದರೆ ಕೊಡುತ್ತದೆ.  

ವಯಸಾಗುತ್ತಿದ್ದಂತೆ ಅನಾರೋಗ್ಯವು ಮಾಹಿತಿಯನ್ನು ನೀಡದೆ ಬಂದು ದೇಹವನ್ನು ಆವರಿಸಿಬಿಡುತ್ತದೆ. ನಾವು ವ್ಯಾಯಾಮ, ಯೋಗ, ಧ್ಯಾನ ಮಾಡುತ್ತಿದ್ದೇವೆ. ಮತ್ತು ನಮ್ಮ ಆಹಾರ ಕ್ರಮ ಉತ್ತಮವಾಗಿದೆ ಎಂದಾಕ್ಷಣ ನಾವು ದೈಹಿಕವಾಗಿ ಫಿಟ್ ಆಗಿದ್ದೇವೆ ಎಂದು ನಿರ್ಲಕ್ಷ್ಯ ಬೇಡ. ನಾವು ಎಷ್ಟೇ ಸಬಲರಾಗಿದ್ದರೂ ನಮ್ಮ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೆ ಎಂದು ಖಚಿತಪಡಿಸಿಕೊಳ್ಳಲು ಆಗಾಗ್ಗೆ ಆರೋಗ್ಯ ತಪಾಸಣೆಗೆ ಹೋಗುವುದು ಮುಖ್ಯವಾಗಿದೆ. ರಕ್ತದೊತ್ತಡ, ಥೈರಾಯ್ಡ್‌, ಮಧುಮೇಹ ಮತ್ತು ಕಾಲೆಸ್ಟ್ರಾಲ್ ಮಟ್ಟದಂತ ಕೆಲವು ಸಾಮಾನ್ಯ ಪರೀಕ್ಷೆಗಳು ಅತ್ಯಗತ್ತ. ನಿಯಮಿತವಾಗಿ ಕಣ್ಣಿನ ಪರೀಕ್ಷೆ, ಚರ್ಮದ ತಪಾಸಣೆ, ಇತ್ಯಾದಿಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ನಿಯಮಿತ ಪರೀಕ್ಷೆ, ವೈಧ್ಯರ ಸಲಹೆ ಮೂಲಕ ಉತ್ತಮ ಆರೋಗ್ಯ ಹೊಂದಬಹುದಾಗಿದೆ. 

ಇಳಿಯ ವಯಸ್ಸಿನಲ್ಲಿ ಕೆಲವು ವಯೋಸಹಜ ರೋಗಗಳಾಗಿದ್ದು ಅವುಗಳಿಗೆ ಎದೆಗುಂದಬಾರದು. ಹಿರಿಯರು ಆರೋಗ್ಯಕರ ಬದುಕಿಗಾಗಿ ಭಾವನಾತ್ಮಕವಾಗಿ ಮತ್ತು ಅಧ್ಯಾತ್ಮಿಕವಾಗಿ ಮಾನಸಿಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಬೇಕು. ವೃದ್ದಾಪ್ಯ ನಿಸರ್ಗದ ನಿಯಮ. ಈ ಹಂತದಲ್ಲಿ ದೈಹಿಕವಾಗಿ ಮಾನಸಿಕವಾಗಿ ಬದಲಾವಣೆ ಸಹಜ. ಅಂಥ ಬದಲಾವಣೆಗಳನ್ನು ಕೆಲವರು ಆರೋಗ್ಯಕರವಾಗಿ ಸ್ವೀಕರಿಸಿದರೆ ಮತ್ತೆ ಕೆಲವರು ಅದನ್ನು ಸಮಸ್ಯೆಯಂದು ಭಾವಿಸುತ್ತಾರೆ. ವೃದ್ಧಾಪ್ಯದ ಸಮಸ್ಯಗಳನ್ನು ಯೋಗ-ಧ್ಯಾನದ ಮೂಲಕ ಸುಲಭವಾಗಿ ಎದುರಿಸಬಹುದು. ದೈಹಿಕ ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ,  

ಇತ್ತೀಚೆಗೆ ನಗರದ ವೇಣುಗ್ರಾಮ ಆಸ್ಪತ್ರೆಯ ತಜ್ಞ ವೈಧ್ಯ Urology/Genito Urinary Surgery ಡಾ. ಶಿವನಗೌಡಾ ಎಂ. ಪಾಟೀಲ ಇವರನ್ನು ಭೆಟ್ಟಿಯಾಗಿದ್ದೆ. ಅವರು ಪ್ರೋಸ್ಟೇಟ್ ಹಿಗ್ಗುವಿಕೆಯ ಲಕ್ಷಣಗಳ ಬಗ್ಗೆ ಒಂದಿಷ್ಟು ಸಲಹೆ ಹಾಗೂ ಮಾಹಿತಿಯನ್ನು  ನೀಡಿದ್ದಾರೆ. ಅದನ್ನು ಲೇಖನ ರೂಪದಲ್ಲಿ ಬರೆದು ಹಿರಿಯ ಜೀವಿಗಳಲ್ಲಿ ಜಾಗೃತಿ ಅರಿವು ಮೂಡಿಸುವ ಪ್ರಯತ್ನ ನನ್ನದು.  

ಸಾಮಾನ್ಯವಾಗಿ ಪ್ರೋಸ್ಟೇಟ ಗ್ರಂಥಿ ಹಿಗ್ಗುವಿಕೆ ಸಮಸ್ಯೆಯೂ ಹಿರಿಯರನ್ನು ಹೆಚ್ಚಾಗಿ ಕಾಡುವ ಸಮಸ್ಯಯಾಗಿದ್ದು, 51 ರಿಂದ 60 ವರ್ಷ ವಯಸ್ಸಿನ ಅರ್ಧದಷ್ಟು ಪುರುಷರು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ 90ಅ ರಷ್ಟು ಪುರುಷರು “ಪ್ರೋಸ್ಟೇಟ್ ಏನ್‌ಲಾರ‌್ಜಮೆಂಟ” ತೊಂದರೆಯಿಂದ ಬಳಲುತ್ತಾರೆಂದು ಸಂಶೋಧನೆಯಿಂದ ತಿಳಿದುಬರುತ್ತದೆ. 

ಪ್ರೋಸ್ಟೇಟ್ ಗ್ರಂಥಿ ಮೂತ್ರಕೋಶ ಮತ್ತು ಶಿಶ್ನದ ನಡುವೆ ಇರುವ ಆಕ್ರೋಡ ಗಾತ್ರದ ಒಂದು ಗ್ರಂಥಿಯಾಗಿದೆ. ಈ ಗ್ರಂಥಿಯು ಮೂತ್ರನಾಳವನ್ನು ಸುತ್ತುವರೆದಿರುತ್ತದೆ. ಇದು ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವದು ಪ್ರೋಸ್ಟೇಟ್ ಗ್ರಂಥಿಯ ಮುಖ್ಯ ಕೆಲಸ. ಅಲ್ಲದೆ ಮೂತ್ರನಾಳ ಮೂತ್ರ ಹಾಗೂ ವೀರ್ಯ ಎರಡನ್ನು ಹೊರಹಾಕುವ ಕೆಲಸ ನಿರ್ವಹಿಸುತ್ತದೆ 

ಜೀವಕೋಶಗಳ ಸಂಖ್ಯೆಯಲ್ಲಿಯ ಹೆಚ್ಚಳದಿಂದಾಗಿ ಪ್ರೋಸ್ಟೇಟ್ ದೊಡ್ಡದಾಗಿ ಬೆಳೆಯುತ್ತದೆ. ವಯಸ್ಸಾದವರಲ್ಲಿ ಪ್ರೋಸ್ಟೇಟ್ ಗ್ರಂಥಿ ಹಿಗ್ಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಲವತ್ತು ವರ್ಷದ ಬಳಿಕ ಪ್ರೋಸ್ಟೇಟ್ ಗ್ರಂಥಿಯು ನಿಧಾನಗತಿಯ, ಸೌಮ್ಯ ರೂಪದ ಊತಕ್ಕೆ ಒಳಗಾಗಿ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಮೂತ್ರನಾಳದ ಮೇಲೆ ಒತ್ತಡ ಬೀಳುತ್ತದೆ ಮತ್ತು ಅದು ಕುಗ್ಗುತ್ತದೆ. ಪ್ರೋಸ್ಟೇಟ್ ಗ್ರಂಥಿಯು ಸಾಮಾನ್ಯ ಗಾತ್ರವನ್ನು ಮೀರಿ ಬೆಳೆದಾಗ ಮೂತ್ರನಾಳಗಳು ಹಿಚುಕಿ ಹಿಡಿದಂತಾಗಿ ಮೂತ್ರವನ್ನು ಮೂತ್ರನಾಳದಲ್ಲಿ ತಡೆಯುವ ಮೂಲಕ ಕಡಿಮೆ ಮೂತ್ರವನ್ನು ಹೊರಹಾಕುತ್ತದೆ. ಇದರಿಂದ ಮೂತ್ರ ಕೋಶದಲ್ಲಿ ಶೇಕರಣೆಯಾದ ಮೂತ್ರ ಸಂಪೂರ್ಣ ಹೊರಹೋಗದೆ ಅಡಚಣೆ ಉಂಟಾಗುತ್ತದೆ.  

ಈ ಅಡಚಣೆಯನ್ನು ನಿವಾರಿಸಿಕೊಳ್ಳಲು ಮೂತ್ರಕೋಶವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮೂತ್ರನಾಳದಿಂದ ಮೂತ್ರ ವಿಸರ್ಜನೆಯಾಗುವಾಗ ಉರಿ ಕಾಣಿಸಿಕೊಳ್ಳಬಹುದು. ಮೂತ್ರ ವಿಸರ್ಜನೆಗೆ ಅವಸರವಾಗುವುದು. ಪದೇ ಪದೇ ಮೂತ್ರಕ್ಕೆ ಹೋಗುವುದು, ಅನಿಶ್ಚಿತ ಮೂತ್ರಶಂಕೆ, ಮೂತ್ರಕೋಶದಿಂದ ಪೂರ್ಣ ಪ್ರಮಾಣದಲ್ಲಿ ಮೂತ್ರ ಹೊರ ಹೋಗುತ್ತಿಲ್ಲ ಎಂದೆನಿಸುವುದು, ಮೂತ್ರಧಾರೆ ತೆಳುವಾಗಿರುವುದು, ಮೂತ್ರ ಅನಿಯಂತ್ರಿತವಾಗಿ ಹರಿಯುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಮಾನಸಿಕ ಹಾಗೂ ದೈಹಿಕ ಕಿರಿಕಿರಿಗೆ ಕಾರಣವಾಗುತ್ತದೆ. ಜೊತೆಯಲ್ಲಿ ಇದು ಜೀವನ ಶೈಲಿಯ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಇದರಿಂದ ಮೂತ್ರದ ಹರಿವಿಗೆ ಪೂರ್ಣ ಪ್ರಮಾಣದಲ್ಲಿ ಅಡೆತಡೆ ಉಂಟಾಗುತ್ತದೆ. ಇದಕ್ಕೆ ಸಾಮಾನ್ಯ ಕಾರಣ ಪ್ರೋಸ್ಟೇಟ್ ಗ್ರಂಥಿಯ ಉರಿಯೂತ (ಪ್ರೋಸ್ಟಟೈಟಿಸ್) ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ.  

ಪ್ರೋಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯಿಂದ ಬಳಲುವ ರೋಗಿಯ ಜೀವನದ ಗುಣಮಟ್ಟ ನಿಧಾನವಾಗಿ ಬಾದಿಸುವುದಕ್ಕೆ ತೊಡಗುತ್ತದೆ. ಸಾಮಾನ್ಯವಾಗಿ ಪ್ರೋಸ್ಟೇಟ್ ಗ್ರಂಥಿಯ ಊತವು ಸೌಮ್ಯ ನಿರುಪಾಯಕಾರಿಯಾಗಿ ಇರುತ್ತದೆ ಆದರೂ ಪ್ರೋಸ್ಟೇಟ್ ಕ್ಯಾನ್ಸರ್ ಆಗಿರುವ ಸಾಧ್ಯತೆಯೂ ಇರಬಹುದು. ರೋಗಿಯು ಅದು ಕ್ಯಾನ್ಸರ್ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯುರಾಲಜಿಸ್ಟ್‌ ಅವರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಪ್ರೋಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಇರುವುದು ಆರಂಭಿಕ ಹಂತದಲ್ಲಿ ಅದು ಪತ್ತೆಯಾಗುವುದರಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. 

ಪ್ರೋಸ್ಟೇಟ್ ಸಮಸ್ಯಗೆ ಚಿಕಿತ್ಸೆಯ ಮೊದಲ ಹಂತವೆಂದರೆ ಓಷಧಗಳ ಸೇವನೆ, ಕಡಿಮೆ ಅಡ್ಡಪರಿಣಾಮಗಳಿರುವ ಹೆಚ್ಚು ಪರಿಣಾಮಕಾರಿ ಓಷಧಗಳು ಲಭ್ಯವಿದ್ದು, ದೀರ್ಘಕಾಲದವರೆಗೆ ತೆಗೆದುಕೊಳ್ಳಬಹುದು. ಓಷಧಗಳಿಗೆ ಬಗ್ಗದ ಅಥವಾ ಅತ್ಯಂತ ದೊಡ್ಡದಾದ ಪ್ರೋಸ್ಟೇಟ್ ಗ್ರಂಥಿಯಿರುವ ರೋಗಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬಹುದು. ಆಧುನಿಕ ಶಸ್ತ್ರಚಿಕಿತ್ಸಾ ವಿಧಾನವಾದ ಎಂಡೋಸ್ಕೋಪಿಯಿಂದ ಪ್ರೋಸ್ಟೇಟ್ ಗ್ರಂಥಿಯ ಚಿಕಿತ್ಸೆ (ಟಿಯುಆರ​‍್ಿಕ್) ಮಾಡಬಹುದು ಮತ್ತು ಲೇಸರ್ ವಿಧಾನದಿಂದ ಮೂತ್ರದ ಹರಿವಿನ ಅಡತಡೆಯನ್ನು ತೆಗೆದು ಹಾಕಬಹುದು. ಈ ಚಿಕಿತ್ಸೆಗಳನ್ನು ಶಿಶ್ನ ಹಾಗೂ ಮೂತ್ರನಾಳದ ಮೂಲಕ ಉಪಕರಣ ಅಳವಡಿಸಿ ಮಾಡುವುದರಿಂದ ತೀರಾ ಕಡಿಮೆ ರಕ್ತಸ್ರಾವ ಇರುತ್ತದೆ. ಇದು ಸುರಕ್ಷಿತವು ಹೌದು. 

ಪ್ರೋಸ್ಟೇಟ್ ಹಿಗ್ಗುವಿಕೆಯ ಲಕ್ಷಣಗಳ ಬಗ್ಗೆ ವೃದ್ಧರಲ್ಲಿ ಅರಿವು ಮೂಡಿಸುವ ಮೂಲಕ ಆಗಾಗ ತಪಾಸಣೆ ಮಾಡುತ್ತಿದ್ದರೆ ಪತ್ತೆ ಹಚ್ಚುವುದು ಸುಲಭ. ಇದರಿಂದ ಜೀವನಮಟ್ಟವನ್ನು ಹಾಗೂ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಚಿಕಿತ್ಸೆ ಒದಗಿಸದೆ ಊತವನ್ನು ಹಾಗೆಯೇ ಬಿಟ್ಟರೆ ಊದಿಕೊಂಡ ಪ್ರಾಸ್ಟೇಟ್ ಗ್ರಂಥಿಯು ಮೂತ್ರಕೋಶದ ಸ್ನಾಯುಗಳಿಗೆ ಹಾನಿ ಉಂಟು ಮಾಡಬಹುದು. ಪದೇಪದೇ ಸೋಂಕುಗಳಿಗೆ ಕಾರಣವಾಗಬಹುದು. ಮೂತ್ರಪಿಂಡಗಳಿಗೆ ಹಾನಿ ಉಂಟುಮಾಡಬಹುದು ಹಾಗೂ ಕೆಲವು ರೋಗಿಗಳಲ್ಲಿ ಮೂತ್ರ ವಿಸರ್ಜನೆ ಸಂಪೂರ್ಣವಾಗಿ ನಿಂತು ಮೂತ್ರ ಕಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು. 

ವ್ಯಕ್ತಿ ಎಷ್ಟು ಶಕ್ತಿಯುತವಾಗಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂಬುದನ್ನು ತಿಳಿಯಲು ಯುರೋಫ್ಲೋ-ಮೆಟ್ರಿ ಮೂತ್ರಧಾರೆಯ ತಪಾಸಣೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ದೊಡ್ಡಗಾತ್ರದ ಪ್ರೋಸ್ಟೇಟ್ ಗ್ರಂಥಿಯು ಮೂತ್ರ ವಿಸರ್ಜನೆಗೆ ಹೆಚ್ಚು ಅಡಚಣೆಯನ್ನು ಒಡ್ಡುತ್ತದೆ. ಒಮ್ಮೊಮ್ಮೆ ಸಣ್ಣಗಾತ್ರದ ಪ್ರೋಸ್ಟೇಟ್ ಗ್ರಂಥಿಯೂ ತೀವೃ ಅಡಚಣೆಯನ್ನು ಒಡ್ಡುವುದುಂಟು. ಹೀಗಾಗಿ ಮೂತ್ರಧಾರೆಯ ತಪಾಸಣೆ ಉಪಯುಕ್ತವಾಗುತ್ತದೆ. ಗಮನಾರ್ಹವಾದ ಅಡಚಣೆ ಇಲ್ಲವಾಗಿದ್ದಲ್ಲಿ, ಪ್ರೋಸ್ಟೇಟ್ ಲಕ್ಷಣಗಳನ್ನು ದೂರ ಮಾಡಲು ಜೀವನಶೈಲಿಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸಹಾಯವಾಗುತ್ತದೆ. 

ಕಾಫಿ, ಚಹಾ ಮತ್ತು ಕೋಲಾದಂತಹ ಕೆಫೀನ್ಯುಯುಕ್ತ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು. ಮಧ್ಯಪಾನವನ್ನು ವರ್ಜಿಸಬೇಕು. ರಾತ್ರಿ ಮೂತ್ರ ವಿಸರ್ಜನೆಗೆ ಏಳಬೇಕಾಗಿ ಬರುವುದನ್ನು ಕಡಿಮೆ ಮಾಡಲು ನಿರ್ದಿಷ್ಟವಾಗಿ ಸಂಜೆ ಮತ್ತು ರಾತ್ರಿ ದ್ರವಾಹಾರ ಸೇವನೆಯನ್ನು ಮಿತಗೊಳಿಸುವುದು ಅಗತ್ಯ. ಪ್ರೋಸ್ಟೇಟ್ ಗ್ರಂಥಿಯ ಊತದಿಂದ ಸಮಸ್ಯಗಳು ತೀವ್ರವಾಗಿರುವ ಅಥವಾ ಅಡಚಣೆ ಇರುವುದು ತಪಾಸಣೆಗಳಿಂದ ಖಚಿತವಾಗಿರುವ ರೋಗಿಗಳಿಗೆ ಪ್ರೋಸ್ಟೇಟ್ ಗ್ರಂಥಿಯನ್ನು ಸಡಲಿಸುವ ಓಷಧಗಳು ಮತ್ತು ಅಗತ್ಯವಿದ್ದರೆ ಅದರ ಗಾತ್ರವನ್ನು ಕುಗ್ಗಿಸುವ ಓಷಧಿಗಳನ್ನು ಶಿಫಾರಸು ಮಾಡಲಾಗುತ್ತದೆ. 

ಪ್ರಾಸ್ಟೇಟ್ ಗ್ರಂಥಿಯ ಸಮಸ್ಯಯು ವಯೋವೃದ್ಧರಾಗುತ್ತಿರುವ ಪುರುಷರಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಸಾಮಾನ್ಯವಾಗಿದೆ. ಇದರಲ್ಲಿ ಮೂತ್ರಾಂಗ ಲಕ್ಷಣಗಳು ಪ್ರಧಾನವಾಗಿರುತ್ತವೆ ಮತ್ತು ಅವುಗಳನ್ನು ಅಲಕ್ಷಿಸಬಾರದು. ಬಹುತೇಕ ಪ್ರಕರಣಗಳಲ್ಲಿ ಊತವು ಸೌಮ್ಯ ರೂಪದ್ದಾಗಿರುತ್ತದೆ. ಆದರೆ ಕ್ಯಾನ್ಸರ್ ಆಗಿರುವ ಸಾಧ್ಯತೆಯೂ ಇರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ, ಯುರಾಲಜಿಸ್ಟ್‌ ಜೊತೆಗೆ ಸಮಾಲೋಚಿಸಿ, ತಪಾಸಣೆಗೊಳಪಡುವುದು ಅತ್ಯಂತ ಮುಖ್ಯ. ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಓಷಧಿಗಳು ಮತ್ತು ಶಸ್ತ್ರಕ್ರಿಯೆ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯಗಳಿಗೆ ಒಳಗಾದ ಪುರಿಷರಿಗೆ ಇರುವ ಚಿಕಿತ್ಸೆಯ ಆಯ್ಕೆಗಳಾಗಿವೆ. 

- ಅನಂತ ಪಪ್ಪು 

ಮೊ: 9448527870 


- * * * -