ಪ್ರವಾದಿ ಮೊಹಮ್ಮದ್ ಅವರ ಜೀವನ ಮಾನವೀಯ ಮೌಲ್ಯಗಳಿಗೆ ದಾರೀದೀಪ: ಗಣ್ಯರ ಅಭಿಪ್ರಾಯ

ಪ್ರವಾದಿ ಮೊಹಮ್ಮದ್ ಅವರ ಜೀವನ ಮಾನವೀಯ ಮೌಲ್ಯಗಳಿಗೆ ದಾರೀದೀಪ: ಗಣ್ಯರ ಅಭಿಪ್ರಾಯ  Prophet Muhammad's life is a beacon for human values: Views of prominent figures


ಕೊಪ್ಪಳ, ಸೆ. 06: ಕ್ರಾಂತಿ ಎಂದರೆ ಸಂಘರ್ಷ ಅಥವಾ ಗಲಭೆಯಲ್ಲ; ಬದಲಿಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ, ಸುಧಾರಣೆ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಯಾಗಿದೆ ಎಂದು ಖ್ಯಾತ ವಿದ್ವಾಂಸರು ಹಾಗೂ ಪ್ರವಚನಕಾರರು ಅಭಿಪ್ರಾಯಪಟ್ಟರು.  

ನಗರದ ಸಾಹಿತ್ಯ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ವತಿಯಿಂದ ಆಯೋಜಿಸಿದ್ದ “ಕ್ರಾಂತಿಯ ಜ್ಯೋತಿ ಪ್ರವಾದಿ ಮೊಹಮ್ಮದ್ (ಸ)” ಕುರಿತ ಸೀರತ್ ಅಭಿಯಾನದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದ್ ಅವರ ಜೀವನವು ಮಾನವೀಯ ಮೌಲ್ಯಗಳಿಗೆ ಆದರ್ಶವಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಮೊಹಮ್ಮದ್ ಕುಂಟಿ ಮಾತನಾಡಿ, ವ್ಯಕ್ತಿತ್ವ ಪರಿಪೂರ್ಣವಾಗಬೇಕು. ಜಗತ್ತಿನ ಅನೇಕ ಸುಧಾರಕರು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ತಂದಿದ್ದಾರೆ.

ಆದರೆ ಪ್ರವಾದಿ ಮೊಹಮ್ಮದ್ ಅವರ 23 ವರ್ಷಗಳ ಪ್ರವಾದಿತ್ವದ ಬದುಕು ಪ್ರತಿಯೊಂದು ಹಂತದಲ್ಲೂ ಪಾರದರ್ಶಕವಾಗಿದ್ದು, ಅದು ಮಾನವಕುಲಕ್ಕೆ ತೆರೆದ ಪುಸ್ತಕದಂತಿದೆ ಎಂದರು. ಸಮಾಜದಲ್ಲಿ ನಾವು ಎಷ್ಟರ ಮಟ್ಟಿಗೆ ಒಳ್ಳೆಯವರಾಗಿದ್ದೇವೆ ಎಂಬುದನ್ನು ಹೊರಗಿನವರಿಗಿಂತ ಕುಟುಂಬ, ಪತ್ನಿ, ಮಕ್ಕಳು ಹಾಗೂ ನೆರೆಹೊರೆಯವರು ನೀಡುವ ಮನ್ನಣೆಯೇ ನಿರ್ಧರಿಸುತ್ತದೆ. ಪ್ರವಾದಿ ಮೊಹಮ್ಮದ್ ಅವರು ಬೋಧನೆಗೆ ಮಾತ್ರ ಸೀಮಿತವಾಗದೆ, ನೈತಿಕ ಹಾಗೂ ಮೌಲ್ಯಾಧಾರಿತ ಸಮಾಜವನ್ನು ಪ್ರಾಯೋಗಿಕವಾಗಿ ನಿರ್ಮಿಸಿ ತೋರಿಸಿದರು ಎಂದು ಹೇಳಿದರು.