ಪೈಗಂಬರರ ಜಯಂತಿ: ಸೌಹಾರ್ದ ಸಂದೇಶ ಸಾರಿದ ಕಾರ್ಯಕ್ರಮ

ಪೈಗಂಬರರ ಜಯಂತಿ: ಸೌಹಾರ್ದ ಸಂದೇಶ ಸಾರಿದ ಕಾರ್ಯಕ್ರಮ  Prophet's Jayanti: A program with a friendly message

ಲೋಕದರ್ಶನ ವರದಿ 

ಮಹಾಲಿಂಗಪುರ 27: ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದ ಬಳಿ ಪ್ರವಾದಿ ಮೊಹಮ್ಮದ್ ಪೈಗಂಬರ ಅವರ 1501ನೇ ಜಯಂತಿಯನ್ನು ಭಾವೈಕ್ಯತೆ, ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರುವ ರೀತಿಯಲ್ಲಿ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಹಾಲಿಂಗಪುರ ನಗರದ ಸೌಹಾರ್ದ ಪರಂಪರೆಗೆ ಮತ್ತೊಂದು ಉತ್ತಮ ಉದಾಹರಣೆಯಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಮಹಾಲಿಂಗಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ ಸತ್ತಿಗೇರಿ, ಪ್ರವಾದಿ ಮೊಹಮ್ಮದ್ ಪೈಗಂಬರರು ಜಗತ್ತಿಗೆ ಶಾಂತಿ, ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆಯ ಮಹತ್ವ ಸಾರಿದ ಮಹಾನ್ ವ್ಯಕ್ತಿ ಎಂದರು. ಎಲ್ಲ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸಹೋದರತ್ವದ ಭಾವನೆಯಿಂದ ಬದುಕಬೇಕು. ಧರ್ಮ ಯಾವುದೇ ಇರಲಿ, ಮಾನವೀಯತೆ ಎಲ್ಲಕ್ಕಿಂತ ಮುಖ್ಯ ಎಂದು ಹೇಳಿದರು.  

ಯುವಕರು ಶಾಂತಿ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ದ್ವೇಷ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಶೇಖರ ಅಂಗಡಿ, ಗಂಗಾಧರ ಮೇಟಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ, ಅಬ್ದುಲ್ ಭಾಗವಾನ, ಹಮೀದ್ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.