ವೃತ್ತಿ ರಂಗಭೂಮಿ ನಾಟಕೋತ್ಸವಕ್ಕೆ ಚಾಲನೆ

ವೃತ್ತಿ ರಂಗಭೂಮಿ ನಾಟಕೋತ್ಸವಕ್ಕೆ ಚಾಲನೆ  Professional Theatre Festival Kicks Off

ಲೋಕದರ್ಶನ ವರದಿ 

ವೃತ್ತಿ ರಂಗಭೂಮಿ ನಾಟಕೋತ್ಸವಕ್ಕೆ ಚಾಲನೆ  

ವಿಜಯಪುರ, ಸೆ. 11 : ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ವಿಜಯಪುರದಲ್ಲಿ ಸೆ.10ರಿಂದ 12ರವರೆಗೆ ಮೂರು ದಿನಗಳ ವೃತ್ತಿ ರಂಗಭೂಮಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ತಿಳಿಸಿದರು.  

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.10ರಂದು ‘ಗ್ರಾಮ ಪಂಚಾಯಿತಿ ಗಂಗವ್ವ’, ಸೆ.11ರಂದು ‘ಗಂಡನಿಗೆ ತಕ್ಕ ಹೆಂಡತಿ’ ಹಾಗೂ ಸೆ.12ರಂದು ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.  

ಕಳೆದ ಎರಡೂವರೆ ವರ್ಷಗಳಲ್ಲಿ ರಂಗಭೂಮಿ ಬಲಪಡಿಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗ್ರಾಮೀಣ, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ನಾಟಕೋತ್ಸವಗಳನ್ನು ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.  

ಪ್ರತಿ ವರ್ಷ 20 ಕಲಾವಿದರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಕಲಾವಿದರನ್ನು ಪ್ರತಿನಿಧಿಸುವಂತೆ ಪ್ರಶಸ್ತಿ ನೀಡುವುದು ಸವಾಲಿನ ಕೆಲಸವಾಗಿದೆ. ಆದರೂ ಕಳೆದ ಎರಡೂವರೆ ವರ್ಷಗಳಲ್ಲಿ 160ಕ್ಕೂ ಹೆಚ್ಚು ಕಲಾವಿದರನ್ನು ಪ್ರಶಸ್ತಿಗಳ ಮೂಲಕ ಗೌರವಿಸಲಾಗಿದೆ ಎಂದರು.  

ಪ್ರತಿ ವರ್ಷ ಫೆ.1ರಿಂದ 6ರವರೆಗೆ ಬೆಂಗಳೂರಿನ ಕಲಾ ಗ್ರಾಮದಲ್ಲಿ ರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗ ಪರಿಷತ್ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತವೆ. ಈ ಬಾರಿ 35 ನಾಟಕಗಳನ್ನು ನಾಲ್ಕು ವೇದಿಕೆಗಳಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆದಿದೆ ಎಂದರು.  

ಇದೇ ವೇಳೆ ಬಸವಣ್ಣನವರ ವಚನಗಳ ಆಧಾರಿತ ‘ವಚನ ಕಲ್ಯಾಣ’ ರಂಗರೂಪಕವನ್ನು ಸಿದ್ಧಪಡಿಸಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶಿಸಲಾಗುವುದು. ನವೆಂಬರ್ನಿಂದ ರಾಜ್ಯಾದ್ಯಂತ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.  

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಕೂಡಲಸಂಗಮ ಸೇರಿದಂತೆ ಕಲ್ಯಾಣ ಕರ್ನಾಟಕದ ಪ್ರಮುಖ ಸ್ಥಳಗಳಲ್ಲೂ ರಂಗರೂಪಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ 1 ಕೋಟಿ ಅನುದಾನ ನೀಡಿದ್ದು, ಒಟ್ಟು 2.15 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಸದಸ್ಯೆ ಜ್ಯೋತಿ ಮಂಗಳೂರು, ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.