ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಪ್ರಿಯಾಂಕ ಗಾಂಧಿಗೆ ನೋಟೀಸ್ ಕಾಂಗ್ರೆಸ್ ಪ್ರತಿಕ್ರಿಯೆ

ನವದೆಹಲಿ, ಜುಲೈ 2:  ದೆಹಲಿಯಲ್ಲಿರುವ  ಸರ್ಕಾರಿ ನಿವಾಸವನ್ನು ಆಗಸ್ಟ್ ೧ ರೊಳಗೆ   ಖಾಲಿ ಮಾಡಬೇಕೆಂದು  ಕೇಂದ್ರ ಸರ್ಕಾರ  ಕಾಂಗ್ರೆಸ್  ನಾಯಕಿ ಪ್ರಿಯಾಂಕ ಗಾಂಧಿ ಅವರಿಗೆ  ನೋಟೀಸ್  ಜಾರಿ ಮಾಡಿರುವ ಕ್ರಮದ ಬಗ್ಗೆ    ಕಾಂಗ್ರೆಸ್    ತೀವ್ರ  ಅಸಹನೆ ವ್ಯಕ್ತಪಡಿಸಿದೆ.  
 ಪ್ರಧಾನಿ ನರೇಂದ್ರ ಮೋದಿ  ಅವರ   ದ್ವೇಷ, ಪ್ರತಿಕಾರ ರಾಜಕೀಯಗಳಿಗೆ  ಈ ಕ್ರಮಗಳು  ಸ್ಪಷ್ಟ ಉದಾಹರಣೆಯಾಗಿವೆ ಎಂದು   ಎಂದು ಆಕ್ರೋಶ  ವ್ಯಕ್ತಪಡಿಸಿದೆ.
ಈ ಸಂಬಂಧ   ಪ್ರತಿಕ್ರಿಯಿಸಿರುವ  ಕಾಂಗ್ರೆಸ್  ವಕ್ತಾರ  ರಣದೀಪ್  ಸುರ್ಜಿವಾಲಾ   ಇಂತಹ ಕ್ರಮಗಳಿಗೆ ಕಾಂಗ್ರೆಸ್  ಭಯಪಡುವುದಿಲ್ಲ. ಮೋದಿ ಸರ್ಕಾರದ  ವೈಫಲ್ಯಗಳನ್ನು  ಪಕ್ಷ   ಎತ್ತಿ ತೋರಿಸುವುದನ್ನು  ಮುಂದುವರಿಸಲಿದೆ ಎಂದು  ಹೇಳಿದ್ದಾರೆ.
ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪಕ್ಷ, ನಾಯಕರ ಮೇಲೆ   ಅದೆಷ್ಟು ತೀವ್ರತೆಯ  ದ್ವೇಷ, ಸೇಡು ಇರಿಸಿಕೊಂಡಿದ್ದಾರೆ  ಎಂಬುದು  ಇಡೀ ದೇಶಕ್ಕೆ ತಿಳಿದಿದೆ. ಇತ್ತೀಚಿಗಂತೂ  ಅದರ  ಎಲ್ಲ ಮಿತಿಗಳನ್ನು  ಅವರು ದಾಟಿದ್ದಾರೆ ಎಂದು ಟೀಕಿಸಿದ್ದಾರೆ. 
 
ಪ್ರಿಯಾಂಕ ಗಾಂಧಿ  ಎಸ್ ಪಿ ಜಿ  ಭದ್ರತೆಯ ವ್ಯಾಪ್ತಿಯಲ್ಲಿ ಒಳಪಟ್ಟಿದ್ದ ಕಾರಣ ಲೋಧಿ ರಸ್ತೆಯಲ್ಲಿರುವ  ನಿವಾಸವನ್ನು  ಅವರಿಗೆ  ಒದಗಿಸಲಾಗಿತ್ತು.  ಆದರೆ ಈ  ನಿವಾಸವನ್ನು  ಇನ್ನೊಂದು ತಿಂಗಳೊಳಗೆ    ಖಾಲಿ ಮಾಡಬೇಕೆಂದು  ಕೇಂದ್ರ  ನಗರಾಭಿವೃದ್ದಿ, ಕಾಮಗಾರಿ ಸಚಿವಾಲಯ  ಬುಧವಾರ  ಅವರಿಗೆ  ನೋಟೀಸ್ ರವಾನಿಸಿದೆ.
ಆಗಸ್ಟ್ ೧ ನಂತರ   ಪ್ರಿಯಾಂಕ ಗಾಂಧಿ  ನಿವಾಸದಲ್ಲಿ   ವಾಸ ಮುಂದುವರಿಸಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು   ನೋಟೀಸ್ ನಲ್ಲಿ  ಸ್ಪಷ್ಟಪಡಿಸಲಾಗಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಒದಗಿಸಿದ್ದ    ಎಸ್ ಪಿಜಿ  ಭದ್ರತೆಯನ್ನು   ಕೇಂದ್ರ ಸರ್ಕಾರ   ಇತ್ತಿಚಿಗೆ  ರದ್ದುಪಡಿಸಿತ್ತು.