ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಆದ್ಯತೆ: ಸಿಇಒ ನೂರ್ಜಹಾನ್

ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಆದ್ಯತೆ: ಸಿಇಒ ನೂರ್ಜಹಾನ್ Priority on providing clean drinking water and sanitation systems to rural areas: CEO Noorjahan

  ವಿಜಯನಗರ (ಹೊಸಪೇಟೆ)17: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು ಹಾಗೂ ಸಮರ​‍್ಕ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೂರ್ಜಹಾನ್ ಮೊಹಮ್ಮದ್ ಅಕ್ರಂ ಶಾ ಸೂಚಿಸಿದರು.  ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಕಾಮಗಾರಿಗಳು ಕೆಲವು ಕಡೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿವೆ. ವಿಳಂಬಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಕಂಡುಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  

ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈಗಾಗಲೇ 36 ಗ್ರಾಮಗಳನ್ನು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳೆಂದು ಗುರುತಿಸಲಾಗಿದ್ದು, 46 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಆದ್ದರಿಂದ ನೀರು ಪೂರೈಕೆ ಮಾಡುವ ಟ್ಯಾಂಕ್ಗಳು ಹಾಗೂ ಟ್ಯಾಂಕರ್ಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.  

ಮಳೆ ಕೊರತೆಯಿಂದ ಜಲಮೂಲಗಳು ಬತ್ತುತ್ತಿದ್ದು, ನೀರಿನಲ್ಲಿ ಕ್ಲೋರೈಡ್ ಮತ್ತು ಫ್ಲೋರೈಡ್ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ನೀರು ಸೇವನೆಯಿಂದ ವಾಂತಿ, ಭೇದಿ, ಕಾಲರಾ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಅಧಿಕಾರಿಗಳು ಕಾಲಕಾಲಕ್ಕೆ ಎಫ್ಟಿಕೆ ಕಿಟ್ಗಳ ಮೂಲಕ ನೀರಿನ ಪರೀಕ್ಷೆ ನಡೆಸಿ, ಕುಡಿಯಲು ಯೋಗ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ವರದಿಗಳನ್ನು ಆನ್ಲೈನ್ನಲ್ಲಿ ದಾಖಲಿಸುವಂತೆ ಸೂಚಿಸಿದರು.