ಶಿಕ್ಷಣ, ನೀರಾವರಿ, ಆರೋಗ್ಯ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಆದ್ಯತೆ : ಶಾಸಕ ಲಕ್ಷ್ಮಣ ಸವದಿ

ಶಿಕ್ಷಣ, ನೀರಾವರಿ, ಆರೋಗ್ಯ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಆದ್ಯತೆ : ಶಾಸಕ ಲಕ್ಷ್ಮಣ ಸವದಿ Priority given to education, irrigation, health and electricity sectors: MLA Lakshman Savadi

ಅಥಣಿ 31 : ಮತ ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ವಿದ್ಯುತ್ ಕ್ಷೇತ್ರಗಳಿಗೆ ವಿಶೇಷ ಅಧ್ಯತೆ ನೀಡಿರುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಅವರು 3.5 ಕೋಟಿ ರೂ.ಗಳ ಅಬ್ಬಿಹಾಳ ರಸ್ತೆ ಸುಧಾರಣೆ, ದರೂರ ಖವಟಕೊಪ್ಪ ರಸ್ತೆ ಕಾಮಗಾರಿಗೆ ಮತ್ತು ದರೂರ ಗ್ರಾಮದ ಬನ್ನಿವರಿ ತೋಟದ ವಸತಿಗೆ ನಿರಂತರ ವಿದ್ಯುತ್ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.ತಾಲೂಕಿನ ಸವದಿ, ಯಲ್ಲಡಗಿ, ಸಂಕೋನಹಟ್ಟಿ, ಪಾರ್ಥನಹಳ್ಳಿ ಹತ್ತಿರ ಮತ್ತು ತೆಲಸಂಗ ಗ್ರಾಮಗಳಲ್ಲಿ 110 ಕಿಲೋ ವ್ಯಾಟ್ ಸ್ಟೇಶನ್ ಗಳು ಮಂಜೂರಾಗಿದ್ದು, ಈಗಾಗಲೇ ಯಲ್ಲಡಗಿ ಗ್ರಾಮದಲ್ಲಿ 110 ಕಿಲೋ ವ್ಯಾಟ್ ಸ್ಟೇಶನ್ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು,

ಇನ್ನೂಳಿದ ಎಲ್ಲ ಸ್ಟೇಶನ್ ಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದ ಅವರು ಈ ಎಲ್ಲ ಸ್ಟೇಶನ್ ಗಳ ಪೂರ್ಣಗೊಳ್ಳುವುದರಿಂದ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ನೀಗುತ್ತದೆ ಎಂದರು. ಅಂದಾಜು 3 ಲಕ್ಷ 50 ಸಾವಿರ ಎಕರೆಗೆ ಮತ್ತು 25 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಹಿಪ್ಪರಗಿ ಆಣೆಕಟ್ಟಿನ ಹಿನ್ನೀರು ಆಣೆಕಟ್ಟಿನ ಗೇಟ್ ಕಿತ್ತು ಹೋದ ಪರಿಣಾಮ ಅಂದಾಜು 2.75 ಟಿ.ಎಮ್‌.ಸಿ ನೀರು ಹರಿದು ಹೋಗಿತ್ತು ಹೀಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗುತ್ತದೆ ಎಂದು ಎಲ್ಲರೂ ಆತಂಕಕ್ಕೀಡಾಗಿದ್ದರು ಆದರೆ ಸದ್ಯದ ಸ್ಥಿತಿ ಗಮನಿಸಿದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ ಯಾರೂ ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. 

ಅಥಣಿ ಪಟ್ಟಣದಲ್ಲಿರುವ 260 ಕಿಲೋ ಮೀಟರ್  ಉದ್ದದ ವಿದ್ಯುತ್  ವಾಯರಗಳನ್ನು ತೆರವುಗೊಳಿಸಿ ಕೇಬಲ್ ಅಳವಡಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಮತ್ತು 460 ಕೋಟಿ ಅನುದಾನದ ಅಥಣಿ ಪಟ್ಟಣದ ಯು.ಜಿ.ಡಿ ಯೋಜನೆ ಕೂಡ ಮಂಜೂರಾತಿ ಹಂತದಲ್ಲಿದೆ ಎಂದರು. ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ಬೆಳೆಯುವ ತಾಲೂಕು ಎನ್ನುವ ಹೆಗ್ಗಳಿಕೆ ಅಥಣಿ ತಾಲೂಕಿಗಿದೆ. ಪೂರ್ವಭಾಗದ 9 ಕೆರೆಗಳನ್ನು ತುಂಬಿಸಿದ ಪರಿಣಾಮ ನೀರಿನ ಕೊರತೆ ಇಲ್ಲದಂತಾಗಿದೆ ಜೊತೆಗೆ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಒಟ್ಟಾರೆ ನೀರಿನ ಸಮಸ್ಯೆ ಬಗೆ ಹರಿದಂತಾಗುವುದು ಎಂದ ಅವರು ಈ ಯೋಜನೆ ಪೂರ್ಣಗೊಂಡ ನಂತರ ಅಥಣಿ ತಾಲೂಕಿನಲ್ಲಿ ಸುಮಾರು ಒಂದು ಕೋಟಿ ಟನ್ ಕಬ್ಬು ಬೆಳೆ ಬೆಳೆಯುವ ಮೂಲಕ ಹೊಸ ದಾಖಲೆ ನಿರ್ಮಾಣಗೊಳ್ಳಲಿದೆ ಎಂದರು.  

ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಗುರುರಾಜ ಸಂಪಣ್ಣವರ, ಎಸ್‌.ಎ.ಪಾರ್ಥನಹಳ್ಳಿ, ಎಮ್‌.ಎಸ್‌.ಅವಟಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್, ಗುತ್ತಿಗೆದಾರರಾದ ರಾಜು ಆಲಬಾಳ, ಅರ್ಜುನ ನಾಯಿಕ, ಅಮೀರ ಖತೀಬ್, ಶಿವರುದ್ರ ಘೂಳಪ್ಪನವರ, ಮಲ್ಲಿಕಾರ್ಜುನ ದಳವಾಯಿ, ಶಿವು ಆಸಂಗಿ, ರಾಜು ಮರಡಿ, ಶಿವಾನಂದ ನಾಯಿಕ, ಶಿವಪುತ್ರ ನಾಯಿಕ, ಮಹಾಂತೇಶ ಐಗಳಿಮಠ, ಪುಟ್ಟು ಶಿಂಧೆ, ಸುರೇಶ ಮಾಯಣ್ಣವರ, ವಿನಾಯಕ ಬಾಗಡಿ, ಅಣ್ಣಪ್ಪ ಚೌಗಲಾ, ಜಗದೀಶ ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.