ಶಿಕ್ಷಕರ ನೇಮಕಾತಿಯಲ್ಲಿ ಕೆಪಿಎಸ್ ಗೆ ಆದ್ಯತೆ: ಎಐಡಿಎಸ್‌ಓ ತೀವ್ರ ವಿರೋಧ!

ಶಿಕ್ಷಕರ ನೇಮಕಾತಿಯಲ್ಲಿ ಕೆಪಿಎಸ್ ಗೆ ಆದ್ಯತೆ: ಎಐಡಿಎಸ್‌ಓ ತೀವ್ರ ವಿರೋಧ!  Priority given to KPS in teacher recruitment: AIDSSO strongly opposes!

ವಿಜಯನಗರ  10: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ಈ ಶೈಕ್ಷಣಿಕ ವರ್ಷದಲ್ಲಿ 2,500 ಐಟಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರವು ಘೋಷಿಸಿದೆ. ಆದರೆ ಎಲ್ಲ ಹುದ್ದೆಗಳನ್ನು ಕೇವಲ ಕೆಪಿಎಸ್ ಶಾಲೆಗಳಿಗೆ ನೀಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ 11,000 ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಈ ಹುದ್ದೆಗಳ ನೇಮಕಾತಿಯಲ್ಲೂ ಕೂಡ ಕೆಪಿಎಸ್ ಶಾಲೆಗಳಿಗೆ ಪ್ರಧಾನ ಆದ್ಯತೆ ನೀಡಲಾಗಿದೆ. ವರ್ಗಾವಣೆಯಲ್ಲೂ ಕೆಪಿಎಸ್ ಗೆ ಪ್ರಾಶಸ್ತ್ಯ. ಈ ಮೂಲಕ ದಶಕಗಳಿಂದ ಹಳ್ಳಿಯ ಬಡ ಮಕ್ಕಳಿಗೆ ಶಿಕ್ಷಣದ ಬಾಗಿಲು ತೆರಿದಿದ್ದ ಹಳ್ಳಿಯ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗಿದೆ. ಇತ್ತೀಚೆಗಷ್ಟೇ ಆರಂಭವಾದ ಕೆಪಿಎಸ್ ಶಾಲೆಗಳನ್ನು ಬೆಳೆಸಲಾಗುತ್ತಿದೆ. ಎಐಡಿಎಸ್‌ಓ ವಿಜಯನಗರ ಜಿಲ್ಲಾ ಸಮಿತಿಯು, ಸರ್ಕಾರದ ಈ ತಾರತಮ್ಯವನ್ನು ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ.  

ಕೆಪಿಎಸ್ ಗೆ ಈ ಹಳ್ಳಿಯ ಶಾಲೆಗಳ ವೀಲೀನವನ್ನು ವಿರೋಧಿಸಿ ಎಐಡಿಎಸ್‌ಓ ಹಾಗೂ ಸಾರ್ವಜನಿಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಸಾವಿರಾರು ಸರ್ಕಾರಿ ಶಾಲೆಗಳ ವೀಲೀನಕ್ಕೆ ನಾಡಿನ ಜನತೆ ತೀವ್ರ ಪ್ರತಿರೋಧವೊಡ್ಡಿದ್ದಾರೆ. ಆದರೆ ಈಗ ನೇರವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚದೇ ನೇಮಕಾತಿ ಮೊದಲುಗೊಂಡಂತೆ ಸರ್ಕಾರದ ಎಲ್ಲ ಸೌಕರ್ಯಗಳನ್ನು ಕೆಪಿಎಸ್ ಶಾಲೆಗಳಿಗೇ ನೀಡುವ ಮೂಲಕ ಹಳ್ಳಿಯ ಶಾಲೆಗಳ ಕೊಲೆಗೆ ಸರ್ಕಾರ ಮುಂದಾಗಿದೆ. ಇದು ನೇರವಾಗಿ ಕತ್ತುಹಿಸುಕದೇ ಓಷಧ ಮತ್ತು ಆರೈಕೆಯನ್ನು ನಿರಾಕರಿಸಿ ರೋಗಿಯೊಬ್ಬನನ್ನು ಕೊಲ್ಲುವ ಕುಕೃತ್ಯ!!  

ರಾಜ್ಯದಲ್ಲಿ 7 ಸಾವಿರ ಏಕೋಪಾಧ್ಯಾಯ ಶಾಲೆಗಳಿವೆ. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಉತ್ತರ ಕರ್ನಾಟಕದ ಶಾಲೆಗಳಲ್ಲಿ; ಅದರಲ್ಲೂ ಕಲ್ಯಾಣ ಕರ್ನಾಟಕದ ಶಾಲೆಗಳು ಶಿಕ್ಷಕರ ತೀವ್ರ ಕೊರತೆ ಎದುರಿಸುತ್ತಿವೆ. ಸರ್ಕಾರವು ಕೂಡಲೇ ಇಂತಹ ಶಾಲೆಗಳಿಗೆ ಆದ್ಯತೆ ನೀಡಿ ಶಿಕ್ಷಕರನ್ನು ಒದಗಿಸಬೇಕೆಂದು ಎಐಡಿಎಸ್‌ಓ ವಿಜಯನಗರ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿ ಜನತೆ ’ನಮ್ಮೂರ ಶಾಲೆ ಉಳಿಸಿ’ ಹೋರಾಟವನ್ನು ತೀವ್ರಗೊಳಿಸಲು ಎಐಡಿಎಸ್‌ಓ ಕರೆ ನೀಡುತ್ತದೆ.