ಕುಡಿಯುವ ನೀರಿಗೆ ಆದ್ಯತೆ: ಸತೀಶ ಜಾರಕಿಹೊಳಿ
Priority for drinking water: Satish Jarkiholi
ಬೆಳಗಾವಿ 28: ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಆಣೆಕಟ್ಟುಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಅಗತ್ಯತೆಗೆ ಸಮರ್ಕವಾಗಿ ಬಳಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಘಟಪ್ರಭಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಲಭ್ಯತೆ ಮತ್ತು ಬಳಕೆಯ ಕುರಿತು ನಿರಂತರ ನಿಗಾ ವಹಿಸಿ, ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯತೆಗಳನ್ನು ಸಮನ್ವಯಗೊಳಿಸಬೇಕು. ಹೆಸ್ಕಾಂ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಶಾಸಕರೊಂದಿಗೆ ನಿಯಮಿತ ಸಭೆ ನಡೆಸಿ, ನೀರಿನ ಲಭ್ಯತೆ, ನೀರಾವರಿ ವ್ಯವಸ್ಥೆ ಹಾಗೂ ವಿದ್ಯುತ್ ಪೂರೈಕೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಆರಂಭಿಕ ಭಾಗದಲ್ಲೇ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗದಂತೆ ಎಚ್ಚರಿಕೆ ವಹಿಸಿ, ಕೊನೆಯ ಭಾಗದ ರೈತರಿಗೂ ಸಮರ್ಕವಾಗಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು. ಕಾಲುವೆ ಮಾರ್ಗದಲ್ಲಿನ ವಿದ್ಯುತ್ ಬಳಕೆಯಿಂದ ನೀರಿನ ಹರಿವಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು. ಕಾಲುವೆ ಸೋರಿಕೆ ತಡೆಗಟ್ಟಲು ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಂಡು, ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನದಿ ಬದಿಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹಾಗೂ ಅನಧಿಕೃತ ಪಂಪ್ಸೆಟ್ಗಳ ಮೂಲಕ ನೀರು ಎತ್ತುವುದನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ನೀರಿನ ಸಮರ್ಕ ಹಂಚಿಕೆ, ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವುದು ಹಾಗೂ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ, ಸಲಹಾ ಸಮಿತಿ ಸದಸ್ಯರು, ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ ಹಾಗೂ ನೀರಾವರಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ 